ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ಮೂರು ದಿನಗಳ ತನಕ, ಗೋಬಿಂದ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬಹದೂರ್, ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಗಳಲ್ಲಿ ಕೆಎಜಿಒ ಕರ್ನಾಟಕ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹೆಮ್ಮೆಯನ್ನುಂಟು ಮಾಡಿದ್ದಾರೆ.
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಾದ ಭವ್ಯಶ್ರೀ ಎಸ್ ಎಸ್, ವಿಜಯಲಕ್ಷ್ಮೀ ಎಚ್ ಎಚ್, ಮಾಣಿಕ್ಯ ಎ ಡಿ, ದೀಕ್ಷಾ ಕೆ ಸಿ, ತನಿಷ್ಕಾ ವಿ ಎಮ್ ಭಾಗವಹಿಸಿದ್ದರು. ತಂಡದ ನಿರ್ವಾಹಣೆಯನ್ನು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಲತಾ ಗೌಡ ಅವರು ನಡೆಸಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ ಹುಲ್ಲಾಳ ನೇತೃತ್ವದಲ್ಲಿ ಶಾಲೆಯ ಕಬಡ್ಡಿ ತರಬೇತುದಾರರಾದ ಕೇಶವ, ಬೈಂದೂರು ಅವರು ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ಗೈದಿದ್ದರು. ಇವರಲ್ಲಿ ಮಾಣಿಕ್ಯ ಎಡಿ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಆಟಗಾರ್ತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇವರೆಲ್ಲರನ್ನೂ ಶಾಲೆಯ ವಾದ್ಯಮೇಳದೊಂದಿಗೆ ಸ್ವಾಗತಿಸಿ, ಶಾಂತಾರಾಮ ವೇದಿಕೆಯಲ್ಲಿ ಗೌರವಿಸಲಾಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶರಣ ಕುಮಾರ ಅಭಿನಂದಿಸಿ ಮಾತನಾಡಿ, ಸಾಧನೆ ಎಂಬುದು ಒಮ್ಮೆಲೇ ದೊರಕಲಾರದು. ಪ್ರತಿಯೊಂದು ಮೆಟ್ಟಿಲನ್ನು ಏರಿ ಸಾಗಿದರೆ ಮಾತ್ರ ಸಾಧಿಸಲು ಸಾಧ್ಯ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮಾಣಿಕ್ಯ ಶಾಲೆಯ ಮಾಣಿಕ್ಯಳಾಗಿದ್ದಾಳೆ. ಎನ್ನುತ್ತಾ ವಿದ್ಯಾರ್ಥಿಗಳ ಜೀವನ ಹೇಗಿರಬೇಕೆಂದು ತಿಳಿಸುತ್ತಾ ಈ ಸಾಧನೆಗೆ ಸಹಕರಿಸಿದ ಸರ್ವರನ್ನೂ ಸ್ಮರಿಸಿದರು.
ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮಾತನಾಡಿ, ಗಿನ್ನಿಸ್ ದಾಖಲೆಯಂತೆ ಇದು ಕೂಡ ಮಹತ್ತರವಾದ ಹೆಜ್ಜೆಯಾಗಿದ್ದು, ಮೊದಲ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಾಧನೆ ಮಾಡಿರುವುದು ಹೆಮ್ಮೆಯೆನಿಸುತ್ತಿದೆ. ಮುಂದಿನ ವರುಷಗಳಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಬೇಕಾಗಿವೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಾಗಿದೆ. ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್, ಪ್ರಾಥಮಿಕಶಾಲಾ ಮುಖ್ಯೋಪಾಧ್ಯಾಯ ಸುಜಾತಾ ಸದಾರಾಮ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಸಂಯೋಜಕರಾದ ಶ್ರೀಮಧು ಕೆ.ಎಲ್ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.

