ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಧರ್ಮಸ್ಥಳ ಕ್ಷೇತ್ರ ಕೇವಲ ತೀರ್ಥಕ್ಷೇತ್ರ ಮಾತ್ರವಾಗಿರದೆ ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿ ಅಪಪ್ರಚಾರಕ್ಕೆ ತೊಡಗಿರುವುದು ಸಮಸ್ತ ಹಿಂದೂಗಳ ಭಾವನೆಗಳಿಗೆ ಮಾಡಿದ ಅನ್ಯಾಯ. ಖಾವಂದರ ಮತ್ತು ಕ್ಷೇತ್ರದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡನೀಯ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಬೈಂದೂರು ರೋಟರಿ ಭವನದಲ್ಲಿ ಬೈಂದೂರು ತಾಲೂಕು ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ನಡೆದ ಜನಾಗ್ರಹ ಸಭೆ ಹಾಗೂ ಜಾಥಾ ಉದ್ಘಾಟಿಸಿ ಮಾತನಾಡಿದರು.
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ರಾಜ್ಯದ ಕೋಟ್ಯತರ ಭಕ್ತರು ಖಾವಂದರು ಮತ್ತು ಧರ್ಮಸ್ಥಳ ಕ್ಷೇತ್ರದ ಸಮಾಜಮುಖಿ ಕಾರ್ಯದ ಜತೆಗಿದ್ದಾರೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡು ವವರನ್ನು ಎಂದಿಗೂ ಸಹಿಸುವುದಿಲ್ಲ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಧರ್ಮಸ್ಥಳ ಪ್ರಕರಣದ ಗೊಂದಲಗಳು ಮತ್ತು ಅಪಪ್ರಚಾರಗಳಲ್ಲಿ ತೊಡಗಿಸಿಕೊಂಡಾಗ ರಾಜ್ಯ ಸರಕಾರ ಎಸ್ ಐಟಿ ತನಿಖೆಗೆ ಆದೇಶಿಸಿ ದಕ್ಷ ಅಧಿಕಾರಿಗಳನ್ನು ನೇಮಿಸಿರುವುದರಿಂದ ಅಪಪ್ರಚಾರ ಮಾಡುವವರ ಬಣ್ಣ ಬಯಲಾಗಿದೆ. ಸತ್ಯಾಸತ್ಯತೆ ಹೊರತರುವ ಮೂಲಕ ಸರಕಾರ ದಿಟ್ಟ ಕ್ರಮ ಕೈಗೊಳ್ಳುವ ಜತೆಗೆ ಭಕ್ತರೆ ಭರವಸೆ ಉಳಿಸಿಕೊಂಡಿದೆ ಎಂದರು.
ನೀರೆ ಕೃಷ್ಣ ಶೆಟ್ಟಿ, ಎಸ್. ರಾಜು ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉದ್ಯಮಿ ವೆಂಕಟೇಶ ಕಿಣಿ, ರಘುರಾಮ ಕೆ. ಪೂಜಾರಿ, ಕೃಷ್ಣಪೂಜಾರಿ, ರಾಮ ಮೇಸ್ತ, ಗೌರಿ ದೇವಾಡಿಗ ನಾರಾಯಣ ಅಳ್ವೆಗದ್ದೆ, ನಾಗಯ್ಯ ಶೆಟ್ಟಿ ನಾರಾಯಣ ಮೇಸ್ತ, ಪುಷ್ಪರಾಜ ಶೆಟ್ಟಿ ರವೀಂದ್ರ ಶೆಟ್ಟಿ ಪಟೇಲ್, ರವೀಂದ್ರ ಶೆಟ್ಟಿ ಆತ್ಮಕ್ಕಿ, ಧಾರ್ಮಿಕ ಮುಖಂಡರು ಉಪಸ್ಥಿತ ರಿದ್ದರು.
ಬಳಿಕ ಬೈಂದೂರು ರೋಟರಿ ಭವನದಿಂದ ಜಾಥಾ ನಡೆಸಿ ತಾಲೂಕು ದಂಡಾಧಿಕಾರಿ, ಉಪ ತಹಸೀಲ್ದಾರ್ ಲತಾ ಶೆಟ್ಟಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹಿರಿಯ ಧಾರ್ಮಿಕ ಮುಖಂಡ ಸತೀಶ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮುಖ್ಯಸ್ಥ ಸುಧಾಕರ ಆಚಾರ್ಯ ಸ್ವಾಗತಿಸಿ, ರಾಮ ಶೆಟ್ಟಿ ಅತ್ತಿಕಾರ್ ನಿರೂಪಿಸಿ, ವೇದಿಕೆಯ ಮುಖ್ಯಸ್ಥ ವಾಸು ಮೇಸ್ತ ವಂದಿಸಿದರು.

