Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬ ಆರೋಪ: ಗ್ರಾಮೀಣ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತಿಯಲ್ಲಿ ಸಮಯಕ್ಕೆ ಸರಿಯಾಗಿ ಸಭೆಗಳನ್ನು ನಡೆಸದೇ ಸಾರ್ವಜನಿಕರಿಗೆ ಅನಾನುಕೂಲ ಮಾಡುತ್ತಿರುವುದನ್ನು ಖಂಡಿಸಿ ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ‌ನೇತೃತ್ವದಲ್ಲಿ ಮಂಗಳವಾರ ಉಪ್ಪುಂದ ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಯಿತು.

ಉಪ್ಪುಂದ ಗ್ರಾಮ ಪಂಚಾಯತ್ ಆಡಳಿತವು ಕಳೆದ ಕೆಲವು ತಿಂಗಳುಗಳಿಂದ ಸಭೆಗಳನ್ನು ನಡೆಸದೇ ಇರುವ ಕಾರಣ ಸಾರ್ವಜನಿಕರ ತೀರಾ ಅವಶ್ಯ ಇರುವ ಹಲವಾರು ಅರ್ಜಿಗಳು ವಿಲೇವಾರಿಯಾಗದೇ ತೊಂದರೆಯಾಗುತ್ತಿದ್ದು ಗ್ರಾಮ ಪಂಚಾಯತ್ ಆಡಳಿತದ ಈ ರೀತಿಯ ಸಾರ್ವಜನಿಕ ವಿರೋಧಿ ಧೋರಣೆಯನ್ನು ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ಖಂಡಿಸಿತು.

ಈ ಸಾರ್ವಜನಿಕ ವಿರೋಧಿ ಧೋರಣೆಗಳನ್ನು ಸರಿಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಸಭೆಗಳನ್ನು ನಡೆಸಿ ಸಾರ್ವಜನಿಕರ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಉಪ್ಪುಂದ ಗ್ರಾಮಸ್ಥರು ಹಾಗೂ ಸಾರ್ವಜನಿಕ ಸ್ನೇಹಿ ಆಡಳಿತ ನೀಡುವಂತೆ ಉಪ್ಪುಂದ ಗ್ರಾಮ ಪಂಚಾಯತ್ ಆಡಳಿತಕ್ಕೆ ಈ ಪ್ರತಿಭಟನೆಯ ಮೂಲಕ ಎಚ್ಚರಿಸಲಾಯಿತು. ಮುಂದಿನ ದಿನಗಳಲ್ಲಿ ಈ ರೀತಿಯ ಸಾರ್ವಜನಿಕ ವಿರೋಧಿ ಧೋರಣೆಗಳು ಉಪ್ಪುಂದ ಗ್ರಾಮ ಪಂಚಾಯತ್ ಆಡಳಿತದಿಂದ ಪುನರಾವರ್ತನೆಗೊಂಡಲ್ಲಿ ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಉಪ್ಪುಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್.ಮದನ್ ಕುಮಾರ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಪ್ರಮೀಳಾ ದೇವಾಡಿಗ, ಪಂಚಾಯತ್ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರುಗಳಾದ ಶೇಖರ್ ಪೂಜಾರಿ, ಬಾಬು ದೇವಾಡಿಗ, ಮಾಜಿ ಸದಸ್ಯರುಗಳಾದ ವಾಸುದೇವ ಪೂಜಾರಿ, ನಾಗರಾಜ ಉಪ್ಪುಂದ , ಮುಖಂಡರುಗಳಾದ ವೆಂಕಟರಮಣ ಖಾರ್ವಿ, ನಾಗೇಶ ಖಾರ್ವಿ, ಗಣಪತಿ ಖಾರ್ವಿ, ವಾಸು ಮೊಗವೀರ, ನಾರಾಯಣ ಆಚಾರ್ಯ, ಭಾಸ್ಕರ್ ಖಾರ್ವಿ, ರಾಮ ಬಬ್ರಿಮನೆ ,ಮೋಹನ ಖಾರ್ವಿ, ನಾಗೇಶ್, ಹರಿಶ್ಚಂದ್ರ, ವಸಂತ ಪೂಜಾರಿ , ಪ್ರಭಾಕರ ಖಾರ್ವಿ , ತೋಮಸ್ ರೋಡ್ರಿಗಸ್, ಮಾಧವ, ನಾಗೇಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Exit mobile version