ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ಜನ್ಮ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನಲ್ಲಿ ಪಿಎಂ ಜನಮನ್ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯ ಮೂಲಕ ಆದಿವಾಸಿ ಸಮುದಾಯದ ಅಭಿವೃದ್ಧಿ, ಮೂಲಸೌಕರ್ಯಗಳಿಗೆ ಒತ್ತು ನೀಡುವ ಕೆಲಸ ಆಗುತ್ತಿದೆ. ರೂ.198.48ಲಕ್ಷ ವೆಚ್ಚದಲ್ಲಿ ಇಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ದೊಡ್ಡ ಮೊತ್ತ ಇಲ್ಲಿಗೆ ಲಭಿಸಿದೆ ಎಂದು ಸಂಸದ ಬಿ. ವೈ.ರಾಘವೇಂದ್ರ ಹೇಳಿದರು.
ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ, ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯಾ ಮಹಾ ಅಭಿಯಾನ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ಕಾಮಗಾರಿ ಎಲ್ 023 ಆತ್ರಾಡಿ ಪಿ.ವಿ.ಟಿ.ಜಿ ಹ್ಯಾಮ್ಲೆಟ್ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ರೂ. 198.48ಲಕ್ಷ ಮಂಜೂರಾಗಿದ್ದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬೈಂದೂರು ಕ್ಷೇತ್ರದಲ್ಲಿ ಪಿಎಂ ಜನಮನ್ ಯೋಜನೆಯಲ್ಲಿ ರೂ.4.89 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ರೂ.1.80 ಕೋಟಿ ವೆಚ್ಚದಲ್ಲಿ ಎಂ.ಪಿ.ಸಿ ಹಾಲ್ ಗಳ ನಿರ್ಮಾಣವಾಗುತ್ತಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳು ಅನುಷ್ಟಾನವಾಗುತ್ತಿದೆ. ಸ್ತ್ರೀಸಬಲೀಕರಣಕ್ಕೆ ಪೂರಕವಾಗಿ ಯೋಜನೆಗಳನ್ನು ಈ ಭಾಗದಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಮೂಸೌಕರ್ಯ ಹಾಗೂ ಸ್ವಾವಲಂಬನೆ ಆಧ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಸಂಸದರು ಕೇಂದ್ರದ ಮೂಲಕ ಬೈಂದೂರು ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ಒದಗಿಸಿಕೊಟ್ಟಿದ್ದಾರೆ. ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯಾ ಮಹಾ ಅಭಿಯಾನ್ ಯೋಜನೆಯಡಿಯಲ್ಲಿ ಬೈಂದೂರು ಕ್ಷೇತ್ರಕ್ಕೆ ಮಹತ್ವದ ಅನುದಾನ ಒದಗಿಸಿದ್ದಾರೆ. ಈ ಭಾಗದ ಗ್ರಾಮೀಣ ರಸ್ತೆಗೆ ಇದರಿಂದ ಕಾಯಕಲ್ಪ ದೊರೆಯಲಿದೆ. ಕ್ಷೇತ್ರದ ಮೇಲೆ ಸಂಸದರು ಇಟ್ಟಿರುವ ಕಾಳಜಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ದನ್ ಜೋಗಿ, ಸದಸ್ಯರಾದ ಉದಯ ಕುಮಾರ್ ಶೆಟ್ಟಿ, ಶಶಿಕಲಾ ಎಸ್., ಸುಬ್ಬು, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷೆ ಅನಿತಾ ಆರ್.ಕೆ., ನಿಕಟಪೂರ್ವ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರುಣ್ ಪೂಜಾರಿ, ಉಪಾಧ್ಯಕ್ಷ ರಾಘವೇಂದ್ರ ನೆಂಪು, ವಂಡ್ಸೆ ಭಾಗದ ಬಿಜೆಪಿ ಪ್ರಮುಖರಾದ ದೀಪಕಕುಮಾರ್ ಶೆಟ್ಟಿ, ನಿರ್ಮಲ ವಂಡ್ಸೆ, ವಿ.ಕೆ ಶಿವರಾಮ ಶೆಟ್ಟಿ, ಗೋಪಾಲ ಶೆಟ್ಟಿ, ರಾಜು ಸೀತಾಗೀತಾ, ಸಂಜೀವ ನಾಯಕ್, ಹನೀಪ್ ಸಾಹೇಬ್, ಗುತ್ತಿಗೆದಾರರಾದ ಉದಯ ಕುಮಾರ ಶೆಟ್ಟಿ ಮೊಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸದರನ್ನು ಅಭಿನಂದಿಸಲಾಯಿತು. ಸುರೇಶ ಐತಾಳ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

