Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರದಂದು ಶಿಕ್ಷಕರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳು, ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ,  ಶುಭಾಂಶು ಶುಕ್ಲಾ ಅವರು ಇಂದು ಭಾರತದ ಹೆಮ್ಮೆಯ ಪುತ್ರನಾಗಿದ್ದು, ಎಲ್ಲರಿಗೂ ತಿಳಿದ ವಿಷಯ. ಅವರು ಆ ಸಾಧನೆಯ ಶಿಖರದಲ್ಲಿದ್ದು ಮಾತಾಡುವಾಗ ಜೀವನಪಥದಲ್ಲಿ ಬೋಧಿಸಿದ ಶಿಕ್ಷಕರನ್ನು ಸ್ಮರಿಸಿದರು. ಪ್ರತಿಯೊಬ್ಬ ಸಾಧಕನ ಹಿಂದೆ ಕಾಣದ ಬಹಳಷ್ಟು ಜನರ ಪರಿಶ್ರಮ ಇದ್ದೇ ಇರುತ್ತದೆ. ಶಿಕ್ಷಕರು ಬಯಸಿದರೆ ಸಮಾಜವನ್ನೇ ಪರಿವರ್ತಿಸಬಹುದು. ವಿದ್ಯಾರ್ಥಿ ಶಿಕ್ಷಕರಿಂದ ಸದಾ ಸನ್ಮಾರ್ಗದರ್ಶನ ಪಡೆಯಬೇಕು. ತಂದೆ ತಾಯಿಯರಿಂದ ಆರಂಭಿಸಿ ನಮಗೆ ತಿಳಿಹೇಳಿದ ಎಲ್ಲರೂ ಶಿಕ್ಷಕರಾಗಿದ್ದು, ಅವರನ್ನು ಗೌರವಿಸುವುದನ್ನು ಮರೆಯಬಾರದು. ಎನ್ನುತ್ತಾ ಶಿಕ್ಷಕರಿಗೆ ಜವಾಬ್ದಾರಿಯನ್ನು ನೆನಪಿಸುತ್ತಾ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿದರು.

ಅತಿಥಿಗಳಾಗಿ ಆಗಮಿಸಿದ ರಾಘವೇಂದ್ರ ಭಾರತೀ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯದ ನಿವೃತ್ತ ಪ್ರಾಂಶುಪಾಲರಾದ ವಿಶ್ವೇಶ್ವರ ಗೋಪಾಲ ಹೆಗಡೆ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಹಟ್ಟಿಯಂಗಡಿಯ ಪೂರ್ಣಚಂದ್ರನಂತೆ ಶೋಭಿಸುವ ವೇದಮೂರ್ತಿ ರಾಮಚಂದ್ರ ಭಟ್ಟರು ಕೇವಲ ಭಕ್ತಿಯ ಮೂಲಕ ಶಕ್ತಿ ಕೇಂದ್ರವಾಗಿ ಹಟ್ಟಿಯಂಗಡಿಯನ್ನು ಬೆಳೆಸಿದ್ದಲ್ಲದೇ ತಮ್ಮ ಭಗೀರಥ ಪ್ರಯತ್ನದಿಂದ ಜ್ಞಾನಗಂಗೆಯನ್ನೇ ಇಲ್ಲಿ ಹರಿಸಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆಯಲ್ಲಿರುವ ಅಧ್ಯಾಪಕರು ಪೂರ್ಣತೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರಬೇಕು.

ಬಿಡದೆ ಸಾಧನೆಗೈಯ್ಯುವ ಛಲ ಅಧ್ಯಾಪಕರದ್ದಾಗಿರಬೇಕು. ಪ್ರೀತಿಯ ಮಾತುಗಳನ್ನಾಡಬೇಕು. ಎಲ್ಲರಲ್ಲೂ ಸಮಚಿತ್ತದಿಂದ ವರ್ತಿಸಬೇಕು. ಬೆಳೆಯ ಜೊತೆ ಕಳೆ ಇರುವಂತೆ ವಿದ್ಯಾರ್ಥಿಯ ವಿದ್ಯಾರ್ಜನೆಯ ಜೊತೆಯಲ್ಲೇ ಇರುವ ದುರ್ಗುಣಗಳನ್ನು ದೂರಮಾಡಬೇಕು. ಸ್ಫಟಿಕದ ಮಣಿಯಂತೆ ಪಾರದರ್ಶಕ ವ್ಯವಹಾರ ನಮ್ಮದಾಗಿರಬೇಕು. ಸ್ವಯಂಪ್ರಜ್ಞೆ ಸದಾ ಜಾಗೃದಾವಸ್ಥೆಯಲ್ಲಿಯೇ ಇರಿಸಿಕೊಂಡು ಮಕ್ಕಳಲ್ಲೂ ಸ್ವತಃ ತಿಳುವಳಿಕೆಯನ್ನು ಮೂಡಿಸಬೇಕು. ಸಹಾಯ ಮಾಡಿದವರನ್ನು ಸ್ಮರಿಸುವ ಗುಣಬೆಳೆಸಿಕೊಳ್ಳಬೇಕು ಎನ್ನುತ್ತಾ ತಮ್ಮ ಸುಭಾಷಿತಗಳ ತರ್ಜುಮೆಗಳಾದ ಕವನಗಳ ಮೂಲಕ ಸರ್ವರಿಗೂ ಮನಮುಟ್ಟುವಂತೆ ತಿಳಿ ಹೇಳಿದರು.

ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ,  ಭಾರತೀಯ ದರ್ಶನಗಳ ಸಾರವನ್ನು ಬೋಧಿಸುತ್ತಿದ್ದ ಶ್ರೇಷ್ಠ ಶಿಕ್ಷಕ ಸರ್ವಪಳ್ಳಿ ರಾಧಾಕೃಷ್ಣನ್‌ರವರು. ಅವರು ನಿರಂತರ ಅಧ್ಯಯನ ನಡೆಸುತ್ತಿದ್ದರು. ಭಾರತೀಯ ಮೌಲ್ಯಯುಕ್ತ ಶಿಕ್ಷಣವನ್ನು ಮಕ್ಕಳಿಗೆ ಬೋಧಿಸುತ್ತಿದ್ದರು. ಭಾರತದ ಮಕ್ಕಳು ವಿಶ್ವಗುರುವಾಗುವಂತೆ ಮಾಡುವುದು ಶಿಕ್ಷಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಲ್ನುಡಿಗಳನ್ನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಬಾಲಚಂದ್ರ ಭಟ್ಟರು ಅಧ್ಯಕ್ಷೀಯ ನುಡಿಗಳಲ್ಲಿ  ಗುರುವು ನಮ್ಮನ್ನು ಗುರುತಿಸಿ ಬೆಳೆಸುತ್ತಾನೆ. ಅವನ ಆದೇಶ ಸರ್ವದಾ ಪಾಲನೀಯವೇ ಆಗಿರುತ್ತದೆ ಎಂದು ಕಥೆಯ ಮೂಲಕ ತಿಳಿಸಿದರು.

ಶಾಲೆಯಲ್ಲಿ ಅಧ್ಯಾಪನ ವೃತ್ತಿಯಲ್ಲಿರುವ ಎಲ್ಲಾ ಶಿಕ್ಷಕರರಿಗೆ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

2024-25ನೇ ಸಾಲಿನಲ್ಲಿ ಶಾಲೆಯ ಹತ್ತನೇ ತರಗತಿಗಳಲ್ಲಿ ಬೋಧಿಸಿದ ಶಾಲೆಯ 21 ವರ್ಷಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಗಳಾದ ಶಿಕ್ಷಕರಿಗೆ ಮತ್ತು ಕ್ರೀಡಾಸಾಧನೆಗಳನ್ನು ತರುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶಿಕ್ಷಕವೃಂದವನ್ನೂ ವಿಶೇಷವಾಗಿ ಗೌರವಿಸಲಾಯಿತು.

ಶಾಲಾ ಸಂಸ್ಥಾಪಕರರಾದ ವೇದಮೂರ್ತಿ ಹೆಚ್ ರಾಮಚಂದ್ರ ಭಟ್ಟರ ಧರ್ಮಪತ್ನಿ ರಮಾದೇವಿ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್, ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಶಾಲೆಯ ಸಂಯೋಜಕರಾದ ಸವಿತಾ ಭಟ್, ಶ್ರೀಮಧು ಕೆ.ಎಲ್, ಲತಾ ದೇವಾಡಿಗ, ದೀಪಿಕಾ, ಶ್ರುತಿ, ಫರ್ನಾಜ್‌, ಶಿಕ್ಷಕ- ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಪ್ರಜ್ವಲ್ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿ ಅಕ್ಷತ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕುಮಾರ ಅಥರ್ವ ಹಾಗೂ ಕುಮಾರಿ ಅಪೂರ್ವ ಅಧ್ಯಾಪಕರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿ ಪ್ರಾಂಜಲಿ ವಂದನಾರ್ಪಣೆಗೈದರು.

Exit mobile version