Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171 ಜಯಂತಿ ಆಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶ ನೀಡಿ ಜಾತಿ ಮತ ಮೇಲು ಕೀಳುಗಳ ಭೇದ ಮರೆಸಿ, ದನಿಯಿಲ್ಲದವರ ದನಿಯಾಗಿ, ಶಕ್ತಿ ಇಲ್ಲದವರಿಗೆ ಆತ್ಮವಿಶ್ವಾಸದ ಶಕ್ತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದು  ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು

ಅವರು ಮಣಿಪುರ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಮಣಿಪುರ ಇವರ ಸಹಕಾರದೊಂದಿಗೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಾಗಾಂಧಿ ಮತ್ತು ರವೀಂದ್ರ ನಾಥ್ ಟಾಗೋರರಂತಹ ವ್ಯಕ್ತಿಗಳು ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸಮಾನತೆಯ ಸಮಾಜ ರೂಪಿಸುವಲ್ಲಿ ಮಾರ್ಗದರ್ಶನ ಪಡೆದಿದ್ದು, ನಾವೂ ಕೂಡಾ ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಪಾಲನೆ ಮಾಡುವ ಮೂಲಕ ಅವರ ಕನಸನ್ನು ನನಸಾಗಿಸಬೇಕು ಎಂದರು.

ಗುರಿ ಮತ್ತು ದಾರಿ ಸ್ಪಷ್ಟವಾಗಿದ್ದಾಗ ಕಾಲ ಮತ್ತು ಸೀಮಾತೀತರಾಗಿ ಮಾನ್ಯತೆ ಪಡೆಯುತ್ತಾರೆ. ಗುರುಗಳು ಆ ಕಾಲಘಟ್ಟದಲ್ಲಿ ರಾತ್ರಿ ಶಾಲೆಗಳನ್ನು ನಡೆಸಿ, ಸಾವಿರಾರು ಜನರಿಗೆ ಉದ್ಯಮ ದೊರಕಿಸಿಕೊಟ್ಟ ಮಹನೀಯರು. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಟರಾಗಿ ಎಂದು ಕರೆ ನೀಡಿದ್ದಾರೆ. ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಕಾಲದಲ್ಲಿ ತಾವೇ ಸ್ವತಃ ಶಿವನನ್ನು ಕುದ್ರೋಳಿಯಲ್ಲಿ ಪ್ರತಿಷ್ಠಾಪಿಸಿ ದಮನಿತ, ಶೋಷಿತ ವರ್ಗಗಳಿಗೆ ದೇಗುಲ ಪ್ರವೇಶ ದೊರಕಿಸಿಕೊಟ್ಟವರು ನಾರಾಯಣ ಗುರುಗಳು ಎಂದರು.

ಪರಿವರ್ತನೆ ನಡೆಯುವಾಗ ಸಂಘರ್ಷಣೆ ಸಹಜ. ಬುದ್ದ, ಬಸವಣ್ಣ, ಅಂಬೇಡ್ಕರ್ ಹಾಗೂ ಇತರ ಸಮಾಜ ಸುಧಾರಕರಂತೆಯೆ ನಾರಾಯಣ ಗುರುಗಳ ಸಂಘರ್ಷಪೂರ್ಣ ಬದುಕಿನ ಸಾರವನ್ನು ತಿಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಮುಂದಿನ ದಿನಗಳಲ್ಲಿ ಗುರುಗಳ ಜಯಂತಿಯನ್ನು ಇನ್ನಷ್ಟು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಿ ಅವರ ವಿಚಾರಗಳು ಸಮಾಜದಲ್ಲಿ ವಿಸ್ತರಣೆ ಹೊಂದುವಂತೆ ಕಾರ್ಯಕ್ರಮ ರೂಪಿಸಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಹಬ್ಬದ ಮಾದರಿಯಲ್ಲಿ ಸಡಗರದಿಂದ ಗುರುಗಳ ಜಯಂತಿಯನ್ನು ಆಚರಿಸಿ ಅವರ ಜೀವನ ಸಂದೇಶಗಳನ್ನು ಜನರಿಗೆ ತಿಳಿಸುವ ಕಾರ್ಯ ಶ್ಲಾಘನೀಯ. ಗುರುಗಳ ಸಂಘರ್ಷ, ಸಮಾನತೆಯ ಸಮಾಜಕ್ಕಾಗಿ ಆಧ್ಯಾತ್ಮಿಕ ದಾರಿಯನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ದೇಗುಲಗಳನ್ನು ನಿರ್ಮಿಸಿದ ಧಾರ್ಮಿಕ ಹೋರಾಟ ಮತ್ತು ಎಲ್ಲರೂ ಒಂದೇ ಎನ್ನುವ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ.  ಮಾನವೀಯ ದೃಷ್ಟಿಯಿಂದ ಸಾರಿದ ಅವರ ಸಂದೇಶಗಳನ್ನು  ನೆನಪಿಸಿ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿ ಮುಂದಿನ ಪೀಳಿಗೆಗಳಿಗೂ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುರುಗಳ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಯುವ ವಾಹಿನಿ ಅಧ್ಯಕ್ಷ ದಯಾನಂದ ಕರ್ಕೇರ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಉಡುಪಿಯ ಭರತನಾಟ್ಯ ಕಲಾವಿದೆ ವಿದುಷಿ ವಿ. ದೀಕ್ಷಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸಾಧನೆ ಕುರಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಭಾಷಣ ಸ್ಪರ್ಧೆಯಲ್ಲಿ ಕೊಕ್ಕರ್ಣೆ ಕೆ.ಪಿ.ಎಸ್ ಶಾಲೆಯ ಪ್ರತೀತಿ ಪಿ.ಎಸ್ ಪ್ರಥಮ, ಸಾಣೂರು ಸರ್ಕಾರಿ ಪ.ಪೂ ಕಾಲೇಜಿನ ಸಫಾ ಅಂಜುಮ್ ದ್ವಿತೀಯ ಹಾಗೂ ಉದ್ಯಾವರ ಸರ್ಕಾರಿ ಪ.ಪೂ ಕಾಲೇಜಿನ ಹನಿ ಪಿ.ಶೆಟ್ಟಿ ತೃತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಮಹೇಶ್ ವಿ. ಆಚಾರ್ಯ ಪ್ರಥಮ, ಮಲ್ಪೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ರಶ್ಮಿತ್ ಅರವಿಂದ್ ದ್ವಿತೀಯ ಹಾಗೂ ಕುಕ್ಕುಂದೂರು ಕೆ.ಎಂ.ಎ.ಎಸ್ ಶಾಲೆಯ ವೈಷ್ಣವಿ ತೃತೀಯ ಸ್ಥಾನ ಮತ್ತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಾಣೂರು ಸರ್ಕಾರಿ ಪ.ಪೂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸ್ನೇಹ ಪ್ರಥಮ, ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಶ್ರಾವ್ಯ ಶೆಟ್ಟಿ ದ್ವಿತೀಯ, ಕಾರ್ಕಳ ಸರಕಾರಿ ಪ.ಪೂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಂದರ್ಶಿನಿ ತೃತೀಯ ಸ್ಥಾನ ಪಡೆದಿದ್ದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶ್ರೀಜಾ ಕೋಟ್ಯಾನ್, ಸುರೇಶ್ ಸುವರ್ಣ ಮತ್ತು ಬಾಲಪ್ರತಿಭೆ ಶ್ರೀಯಾ ಕೋಟ್ಯಾನ್ ಭಕ್ತಿಗೀತೆ ಹಾಡಿದರು.

ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಣಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್.ಕದ್ರೋಳಿ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಅಧ್ಯಕ್ಷ ನಟರಾಜ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಹೇಶ್ ನಿರೂಪಿಸಿ, ಚಂದ್ರಶೇಖರ್ ಸಾಲ್ಯಾನ್ ವಂದಿಸಿದರು.

Exit mobile version