ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ಆಶ್ರಯದಲ್ಲಿ ಸೇವಾ ಸಂಗಮದ ಪುಟಾಣಿಗಳಿಂದ 41ನೇ ವರ್ಷದ ಶ್ರೀಕೃಷ್ಣ – ರಾಧೆಯರ ಬಾಲ ಲೀಲೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಕಾರ್ಯವಾಹ ಪ್ರಶಾಂತ್ ಅವರು ಮಾತನಾಡಿ, ಶ್ರೀ ಕೃಷ್ಣನ ವೇಷಧಾರಣೆ ಮಾತ್ರದೊಂದಿಗೆ ಶ್ರೀ ಕೃಷ್ಣನ ಆದರ್ಶಗಳನ್ನು ಪಾಲಿಸಲಾಗುವುದಿಲ್ಲ ಜೊತೆಯಲ್ಲಿ ಶ್ರೀ ಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದ್ವಿನಿಯೋಗವಾಗುವುದೆಂದು ನೆರೆದ ಸಮಸ್ತ ಪಾಲಕವೃಂದಕ್ಕೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರು ಮಾತನಾಡಿ, 4 ದಶಕಗಳನ್ನು ಪೂರೈಸಿ 5ನೇ ದಶಕದಲ್ಲಿ ಮುನ್ನಡೆಯುತ್ತಿರುವ ಬೈಂದೂರು ಸೇವಾ ಸಂಗಮದ ಕಾರ್ಯವೈಖರಿ ಮತ್ತು ಪಾಲಕರ ಪ್ರೋತ್ಸಾಹ ಹಾಗೂ ಊರಿನ ಸಮಸ್ತ ಜನತೆಯ ಸಹಕಾರವನ್ನು ಸ್ಮರಿಸುತ್ತ ಮುಂದೆಯೂ ಕೂಡ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಶ್ರಮಿಸುತ್ತಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸೇವಾ ಸಂಗಮದ ಕಾರ್ಯದರ್ಶಿ ರಾಜೇಶ್ ಐತಾಳ್, ವ್ಯವಸ್ಥಾಪಕ ದಿನೇಶ್ ಹಾಗೂ ಉಪಾಧ್ಯಕ್ಷ ರವೀಂದ್ರ ಶಾನುಭಾಗ್, ಉಪಸ್ಥಿರಿದ್ದು ಶುಭ ಹಾರೈಸಿದರು.
ಸದಸ್ಯೆ ಆಶಾ ದಿನೇಶ್ ಸ್ವಾಗತಿಸಿ, ಉಪಾಧ್ಯಕ್ಷ ಸುಧಾಕರ ಪಿ. ಬೈಂದೂರು ನಿರೂಪಿಸಿ, ನಿರ್ಮಲಾ ರವಿಂದ್ರ ಕಿಣಿ ವಂದಿಸಿದರು.
ಕೊನೆಯಲ್ಲಿ ಸುಮಾರು 50ಕ್ಕೂ ಮಿಕ್ಕಿದ ಪುಟಾಣಿಗಳಿಂದ “ಶ್ರೀಕೃಷ್ಣ-ರಾಧೆ”ಯರ ಲೀಲಾೋತ್ಸವ ನೆರೆದ ಸಮಸ್ಯೆ ಜನತೆಗೆ ರಸದೌತಣ ನೀಡಿತು.