Site icon Kundapra.com ಕುಂದಾಪ್ರ ಡಾಟ್ ಕಾಂ

ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು: ಸಂಸದ ಬಿ.ವೈ.ಆರ್‌ ಆಗ್ರಹ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಸ್ವಚ್ಛಂದವಾಗಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಅತ್ಯಂತ ಆತಂಕಕಾರಿಯಾಗಿದೆ. ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು, ಪಾಕಿಸ್ತಾನ – ಪರ ಘೋಷಣೆ ಕೂಗಿರುವುದನ್ನು ನಾನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ ಮತ್ತು ಕಿಡಿಗೇಡಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕೀಯಕ್ಕೆ ಮತ್ತೊಂದು ಕನ್ನಡಿ ಹಿಡಿದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಆಗೃಹಿಸಿದ್ದಾರೆ.

ಇದಕ್ಕೆ ಕುಮ್ಮಕ್ಕು ನೀಡುವಂತೆ, ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆ ಇದೆ” ಎಂದು ಹೇಳಿಕೆ ನೀಡಿರುವುದು, ಈ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆಯ ಅಸಲಿ ಮುಖವನ್ನು ಬಯಲು ಮಾಡಿದೆ. ಒಂದು ಕಡೆ, ನಮ್ಮ ಸೈನಿಕರು “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಮೂಲಕ ಶತ್ರು ರಾಷ್ಟ್ರದ ವಿರುದ್ಧ ಸಮರ ನಡೆಸುತ್ತಿದ್ದರೆ, ಮತ್ತೊಂದು ಕಡೆ, ನಮ್ಮ ರಾಜ್ಯದ ಒಳಗೆಯೇ ಕೆಲವು ಮತಾಂಧ ಶಕ್ತಿಗಳು, ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾರೆ, ಇದನ್ನು ನೋಡಿಯೂ ಈ ಸರ್ಕಾರ ಸುಮ್ಮನೆ ಕಣ್ಮುಚ್ಚಿ ಕುಳಿತಿದೆ ಎಂದರೆ ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಕೇವಲ ತಮ್ಮ ತುಷ್ಟಿಕರಣ ರಾಜಕೀಯಕ್ಕಾಗಿ, ದೇಶವಿರೋಧಿ ಚಟುವಟಿಕೆಗಳನ್ನು, ದುಷ್ಕರ್ಮಿಗಳನ್ನು ಮಟ್ಟ ಹಾಕದೆ ರಾಜ್ಯ ಸರ್ಕಾರವೇ ಪೋಷಿಸುತ್ತಿರುವುದು ನಿಜಕ್ಕೂ ದುರಂತ!

ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಕರ್ನಾಟಕದಲ್ಲಿ ದೇಶ ವಿರೋಧಿ ಚಟುವಟಿಕೆಗಳು, ಅರಾಜಕತೆ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ದುಷ್ಕರ್ಮಿಗಳ ಅಟ್ಟಹಾಸದಲ್ಲಿ ಮಾತ್ರ ಹೆಚ್ಚಳವನ್ನು ಮಾತ್ರ ಕಂಡಿದೆ. ಈ ಸರ್ಕಾರ ತಮ್ಮ ಪರವಾಗಿದೆ ಎನ್ನುವ ಧೈರ್ಯ ಈ ದುಷ್ಕರ್ಮಿಗಳಿಗೆ ಇರುವುದರಿಂದಲೇ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ.

. ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಲಾಯಿತು.
. ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ಒಳಗೆಯೇ ಪಾಕಿಸ್ತಾನ್ ಪರ ಘೋಷಣೆ ಕೂಗಲಾಯಿತು.
. ಮಂಡ್ಯದ ಕೆರೆಕೋಡಿಯಲ್ಲಿ ಜನರ ಭಕ್ತಿಯ ಸಂಕೇತವಾದ ಹನುಮಾನ್ ಧ್ವಜವನ್ನು ತೆಗೆದು ಹಾಕಲಾಯಿತು.
. ದಕ್ಷಿಣ ಕನ್ನಡದಲ್ಲಿ “ಭಾರತ್ ಮಾತಾ ಕಿ ಜೈ” ಎಂದು ಹೇಳಿದ್ದಕ್ಕಾಗಿ ಯುವಕನ ಮೇಲೆ ಚಾಕು 20,
. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಹಿಂಸಾಚಾರ, ದೊಂಬಿ, ಗಲಭೆಗಳಲ್ಲಿ ತೊಡಗಿದ ಸಮಾಜವಿರೋಧಿ ದುಷ್ಕರ್ಮಿಗಳ ಮೇಲಿನ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಂಡಿದೆ.
. ಅಸಂಬದ್ಧ ಮತ್ತು ದುರುದ್ದೇಶಪೂರಿತ ಅನಾಮಿಕನ ದೂರಿನ ಆಧಾರದ ಮೇಲೆ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಪರಿಸರದಲ್ಲಿ ತನಿಖೆ ನಡೆಸಲು ಈ ಕಾಂಗ್ರೆಸ್ ಸರ್ಕಾರ ತುರಾತುರಿಯಲ್ಲಿ SIT ರಚಿಸಿತು.
. ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಕೋಮು ಗಲಭೆಗಳ ಸಮಯದಲ್ಲಿ, ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಲಾಯಿತು.

ಇಂತಹ ಘಟನೆಗಳು ಮೇಲಿಂದ ಮೇಲೆ ಪುನರಾವರ್ತನೆಯಾಗುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ, “ಅವರು ಶಾಂತಿ ಪ್ರಿಯರು” ಎಂದು ಹೇಳಿಕೆ ನೀಡುತ್ತಾರೆ. ಆಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಅವರು ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಇದು ಮತಾಂಧರನ್ನು ಮತ್ತಷ್ಟು ಪ್ರಚೋದಿಸುತ್ತದೆ ಮತ್ತು ಅಂತಹ ಕೃತ್ಯಗಳಿಗೆ ರಾಜ್ಯ ಸರ್ಕಾರದ ಪರೋಕ್ಷ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂಬ ಅರಿವು ನಮ್ಮ ಮುಖ್ಯಮಂತ್ರಿಗಳಿಗೆ ಇಲ್ಲವೇ? ಇದಕ್ಕೆ ಸಾಕ್ಷಿಯೇ ನಿನ್ನೆ ಭದ್ರಾವತಿಯಲ್ಲಿ ನಡೆದಿರುವ ಪಾಕಿಸ್ತಾನ-ಪರ ಘೋಷಣೆಯ ದುರ್ಘಟನೆ!

ತಮ್ಮ ಓಟ್ ಬ್ಯಾಂಕ್ ಎನ್ನುವ ಕಾರಣಕ್ಕೆ ಒಂದು ಸಮುದಾಯವನ್ನು ರಾಜ್ಯ ಸರ್ಕಾರ ಅತಿಯಾಗಿ ಓಲೈಸುತ್ತಿದ್ದು, ಆ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ನೀಡುತ್ತಿರುವ ಬೆಂಬಲ ಮತ್ತು ಹಿಂದೂ ವಿರೋಧಿ ನಿಲುವುಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾಂಗ್ರೆಸ್ ಸರ್ಕಾರದ ಕೀಳು ತುಷ್ಟಿಕರಣ ರಾಜಕಾರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯಬಾರದು. ಪರಿಸ್ಥಿತಿ ಕೈಮೀರುವ ಮುನ್ನವೇ, ಭದ್ರಾವತಿಯಲ್ಲಿ ನಡೆದಿರುವ ದೇಶ-ವಿರೋಧಿ ಚಟುವಟಿಕೆಗಳಿಗೆ ಕಾರಣರಾದವರ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ.

Exit mobile version