Site icon Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ ಸ್ಪರ್ಧೆ: ನೋಂದಣಿಗೆ ಅವಕಾಶ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಅತೀ ದೊಡ್ಡ ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಸುವರ್ಣಾವಕಾಶ ಒದಗಿಸಿದೆ.

ಹಾಗೆಯೇ ವಿಶ್ವಕೌಶಲ್ಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುವುದರ ಮೂಲಕ ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡುತ್ತಿದೆ. 2 ವರ್ಷಗಳಿಗೊಮ್ಮೆ ನಡೆಯುವ ಇಂಡಿಯಾ ಸ್ಕಿಲ್ಸ್ ಕರ್ನಾಟಕ – 2025 (ವರ್ಲ್ಡ್ ಸ್ಕಿಲ್ಸ್) ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 75 ಕ್ಕಿಂತಲೂ ಹೆಚ್ಚು ದೇಶಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. 16 ರಿಂದ 25 ವರ್ಷದೊಳಗಿನ ಯುವಜನತೆ 63 ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತೀ ದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಠತೆಯ ಕಾರ್ಯಕ್ರಮವಾಗಿದೆ.

2026ನೇ ಸಾಲಿಗೆ ವಿಶ್ವ ಕೌಶಲ್ಯ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದ್ದು, ಕರ್ನಾಟಕ ರಾಜ್ಯದ ಯುವಜನತೆಯ ಜ್ಞಾನಾರ್ಜನೆಗೆ ಸೂಕ್ತ ವೇದಿಕೆ ಕಲ್ಪಿಸಲು ಹಾಗೂ ಮಾದರಿ ಕೌಶಲ್ಯಾಭರಿತ ರಾಜ್ಯವನ್ನಾಸಗಿಲು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (ಇಂಡಿಯಾ ಸ್ಕಿಲ್ಸ್ ಕರ್ನಾಟಕ -2025) ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ, ವಲಯ ಹಾಗೂ ರಾಜ್ಯಮಟ್ಟಗಳಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ.

ಸ್ಪರ್ಧೆಗೆ ಭಾಗವಹಿಸಲು ಇಚ್ಛೆಯುಳ್ಳವರು https://www.skillindiadigital.gov.in/home ಲಿಂಕ್ ಬಳಸುವ ಮೂಲಕ ಸೆಪ್ಟಂಬರ್ 30 ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗೆ ಮೊ.ನಂ: 9606492216 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕಛೇರಿ, ಉಡುಪಿ ಅನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

Exit mobile version