Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುವ ಶಿಕ್ಷಕನ ಪಾತ್ರ. ಶಿಕ್ಷಣ ಪದ್ಧತಿ ಬದಲಾದ ಈ ಕಾಲಘಟ್ಟದಲ್ಲಿ ಅತೀ ಮುಖ್ಯ. ತಂತ್ರಜ್ಞಾನಗಳು ಮಾಹಿತಿಯನ್ನಷ್ಟೇ ನೀಡುತ್ತವೆ. ಆದರೆ ಶಿಕ್ಷಕ ಸಂಸ್ಕಾರಯುತವಾದ ವಿದ್ಯೆಯನ್ನು ಕಲಿಸುವಾತ. ಈ ನಿಟ್ಟಿನಲ್ಲಿ ತಂದೆ ತಾಯಿಯನ್ನು ಗೌರವಿಸುವಂತೆ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವಂತಾಗಬೇಕು ಎಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟರಮಣ ಬಿ. ನಾಯಕ್ ಹೇಳಿದರು.

ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್  ಮಾತನಾಡಿ, ಶಿಕ್ಷಕರಿಗೆ ಬಹುದೊಡ್ಡ ಕೊಡುಗೆ ವಿದ್ಯಾರ್ಥಿಗಳು ಕೊಡುವ ಗೌರವ ಮತ್ತು ಸನ್ನಡತೆ ಅಂತಹ ಸನ್ನಡತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಿ ಎಂದರು.

ಈ ವೇಳೆ ವೆಂಕಟರಮಣ ಬಿ. ನಾಯಕ್ ಹಾಗೂ ಉದಯ್ ನಾಯ್ಕ್ ಅವರನ್ನು ಸನ್ಮಾನಿಸಿ, ಗುರು ನಮನ ಸಲ್ಲಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮನೀಷಾ ಪ್ರಾರ್ಥಿಸಿ, ಪ್ರಸನ್ನ ಹಾಗೂ ನಿರೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯಾ ಸ್ವಾಗತಿಸಿ, ಅಕ್ಷಿತಾ ನಿರೂಪಿಸಿ, ದರ್ಶನ್ ವಂದಿಸಿದರು.

Exit mobile version