
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟ್ ಪಂದ್ಯಾಟ 2025-26ರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜು ತಂಡ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ತಂಡ ಕ್ರಮವಾಗಿ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೆನ್ನಿಕಾಯ್ಟ್‌ನಲ್ಲಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ತಂಡ ಮತ್ತು ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜು ಹುಡುಗಿಯರ ತಂಡ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಹುಡುಗರ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡರೆ, ಟೆನ್ನಿಕಾಯ್ಟ್‌ನಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಮತ್ತು ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹುಡುಗಿಯರ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಹರೀಶ್ ನಾಯಕ್, ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಖಜಾಂಚಿ ಎನ್. ಅಶ್ವಿನ್ ನಾಯಕ್, ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭಾಸ್ಕರ ಎಚ್.ಜಿ. ಮತ್ತು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೂರಜ್ ಸಾರಂಗ್, ನಿರಂಜನ್ ಮತ್ತು ದೀಕ್ಷಿತ್ ಮೇಸ್ತ ಹಾಗೂ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.