Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಲಕ್ಷದೀಪೋತ್ಸವ, ರಥೋತ್ಸವ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ನಗರದ ಇತಿಹಾಸ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಲಕ್ಷದೀಪೋತ್ಸವಕ್ಕೆ ಗುರುವಾರ ಅದ್ದೂರಿಯ ಚಾಲನೆ ದೊರಕಿತು. ದೇವಳದಲ್ಲಿ ಶ್ರೀ ಕುಂದೇಶ್ವರನಿಗೆ ವಿಶೇಷ ಪೂಜೆ, ಭಕ್ತರಿಂದ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು ನಡದರೇ ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ದೇವಳದ ಪುಷ್ಪ ರಥೋತ್ಸವಕ್ಕೆ ಹಾಗೂ ಶ್ರೀ ದೇವರ ಕಟ್ಟೆಪೂಜೆ ಚಾಲನೆ ನೀಡಲಾಯಿತು. ಕುಂದಾಪುರ ನಗರ ದೀಪಾಲಂಕಾರದಿಂದ ಶೋಭಾಯಮಾನವಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ದೀಪೋತ್ಸವದ ಮೆರಗು ಹೆಚ್ಚಿಸಿತ್ತು.

ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ. ಈ ಸಂದರ್ಭದಲ್ಲಿ ರಥೋತ್ಸವದ ಮಾದರಿಯಲ್ಲೇ ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಣೆ. ಕೊನೆಯ ಸುತ್ತಿನಲ್ಲಿ ಶ್ರೀ ದೇವರು ಪಾಲಕಿಯನ್ನೇರಿ ಕ್ರಮಿಸಲಾಗುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ)

ನಂತರ ಪುರಮೆರವಣಿಗೆಯ ಆರಂಭ. ಅದು ಮುಗಿಯುವುದು ಬೆಳಗಿನ ಜಾವ ಐದರ ನಂತರ. ವೈಭವದ ಈ ಪುರಮೆರವಣಿಗೆಯಲ್ಲಿ ಪ್ರತಿವರ್ಷವೂ ಬಗೆ-ಬಗೆಯ ಆಕರ್ಷಣೆಗಳು. ನಾಗಸ್ವರವಾದನ, ಸಾಂಪ್ರದಾಯಿಕ ವಾದ್ಯ, ಜಾನಪದ ನೃತ್ಯಗಳು, ತಟ್ಟಿರಾಯ, ಬೆಂಕಿ ಆಟ, ಲಾಟಿ ತಾಲೀಮು, ಡೊಳ್ಳು ವಾದನ, ಚಂಡೆವಾದನ, ಕೀಲು ಕುದುರೆ, ಗೊಂಬೆ ಕುಣಿತ, ವೀರಗಾಸೆ, ಪಟ್ಟದ ಕುಣಿತ, ನಾಸಿಕ್ ಡೋಲು – ಹೀಗೆ ವರ್ಷದಿಂದ ವರ್ಷಕ್ಕೆ ವೈವಿಧ್ಯ; ವಿಶೇಷ ಆಕರ್ಷಣೆ. ಶ್ರೀ ದೇವರ ಉತ್ಸವ ದೇವಾಲಯದಿಂದ ಹೊರಟು, ಹೊಸ ಬಸ್‌ಸ್ಟಾಂಡ್ ಬಳಿ ತಿರುಗಿ, ಪುರಸಭೆಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಂಗ್ಳೂರು ಗೆಳೆಯರ ಬಳಗದವರೆಗೂ ಹೋಗಿ, ನಂತರ ಬೆಳಗಿನ ಜಾವ ದೇವಾಲಯದ ರಥಬೀದಿಯ ಕಡೆಗೆ ಆಗಮಿಸಿದರು. ಇಡೀ ನಗರದಲ್ಲಿ ಸಂಚರಿಸುವ ಇಷ್ಟೊಂದು ದೂರವ್ಯಾಪಿ ಉತ್ಸವ ಕುಂದಾಪುರದಲ್ಲಿ ಮತ್ತೊಂದಿಲ್ಲ.

ಕಟ್ಟೆಪೂಜೆ: ಭಕ್ತಾದಿಗಳು ಉತ್ಸವ ಕ್ರಮಿಸುವ ಮಾರ್ಗದಲ್ಲಿ ಅಲ್ಲಲ್ಲಿ ಆಕರ್ಷಕ ವೇದಿಕೆಗಳನ್ನು ನಿರ್ಮಿಸಿ, ಅಲ್ಲಿಗೆ ಶ್ರೀ ದೇವರನ್ನು ಆಹ್ವಾನಿಸಿ, ಪೂಜೆ ನೆರವೇರಿಸಿದರು. ಭಕ್ತಿ ಶ್ರದ್ಧೆಯಿಂದ ಬೀಳ್ಕೊಡುತ್ತಾರೆ. ಸುಮಾರು 20 ನಿಮಿಷ ಅವಧಿಯ ಈ ಕಟ್ಟೆಪೂಜೆಯಲ್ಲಿ ಭಕ್ತಾದಿಗಳಿಗೆಲ್ಲ ಪಂಚಕಜ್ಜಾಯ ಪ್ರಸಾದ ವಿತರಣೆ ನಡೆಯುತ್ತದೆ. ಹೀಗೆ ಸುಮಾರು ಹದಿನಾರು ಕೇಂದ್ರಗಳಲ್ಲಿ ಕುಂದೇಶ್ವರನಿಗೆ ಕಟ್ಟೆಪೂಜೆ ನಡೆಯಿತು. (ಕುಂದಾಪ್ರ ಡಾಟ್ ಕಾಂ ವರದಿ)

ತೆಪ್ಪೋತ್ಸವ: ಕುಂದೇಶ್ವರ ಕೆರೆಯಲ್ಲಿ ಎರಡು ದೋಣಿಗಳನ್ನು ಸೇರಿಸಿ ಮಾಡಿದ ವಿಶೇಷ ತೆಪ್ಪದಲ್ಲಿ ಶ್ರೀ ದೇವರು ತಂತ್ರಿಗಳು, ಅರ್ಚಕರು ಮತ್ತು ದೀವಟಿಗೆಯವರೊಡನೆ ಮೂರು ಸುತ್ತು ಬರುವ ಆ ಸಂಭ್ರಮ ಭಕ್ತಾದಿಗಳ ಮನಸ್ಸಿಗೆ ಮುದತು. ಕೆರೆಯ ಸುತ್ತಲೂ ಹಚ್ಚುವ ಹಣತೆ ದೀಪದ ಬೆಳಕು ಕೆರೆಯಲ್ಲಿ ಪ್ರತಿಫಲನಗೊಂಡು ಒಂದು ಹೊಸ ಬೆಳಕಿನ ಲೋಕವನ್ನೇ ಸೃಷ್ಟಿಸುತು. ನಂತರ ದೇವಾಲಯದ ಅಶ್ವತ್ಥಕಟ್ಟೆಯಲ್ಲೊಂದು ಪೂಜೆ; ಅಷ್ಟಾವಧಾನ ಸೇವೆ. ದೇವಾಲಯದ ಹೊರ ಸುತ್ತಿನಲ್ಲಿ ಮತ್ತೊಂದು ಕಟ್ಟೆಪೂಜೆ. ಪ್ರದಕ್ಷಿಣ ಪಥದಲ್ಲಿರುವ ಈಡುಗಲ್ಲಿಗೆ ಸಂಪ್ರದಾಯದಂತೆ ತೆಂಗಿನ ಕಾಯಿಗಳನ್ನು ಕುಟ್ಟಿ ಒಡೆಯುವುದು; ಅದನ್ನು ಮಡಿವಾಳ ಕುಟುಂಬದವರು ಪ್ರಸಾದವೆಂದು ಶ್ರದ್ಧೆಯಿಂದ ಹೆಕ್ಕಿಕೊಳ್ಳುವುದು ನಡೆಯಿತು. ಇದನ್ನೆಲ್ಲ ಮುಗಿಸಿ, ಹೊರಪ್ರಾಕಾರದಲ್ಲಿ ಒಂದು ಪ್ರದಕ್ಷಿಣೆ ಬಂದು ಶ್ರೀದೇವರ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ನಂತರ ಮಂಗಳಾರತಿ; ಮಂತ್ರಾಕ್ಷತೆ; ತಂತ್ರಿಗಳಿಂದ ರಾಷ್ಟ್ರಾಶೀರ್ವಾದ, ಪ್ರಸಾದ ವಿತರಣೆ ನಡೆಯಿತು. (ಕುಂದಾಪ್ರ ಡಾಟ್ ಕಾಂ ವರದಿ)

ವರದಿ & ಫೋಟೋ: ಸುನಿಲ್ ಹೆಚ್. ಜಿ. ಬೈಂದೂರು

 

Exit mobile version