ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿ.ಎಸ್.ಬಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದಲ್ಲಿ ಆದಿತ್ಯವಾರದಂದು ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮವನ್ನು ಪುತ್ತೂರಿನ ಸುಕ್ರತೀಂದ್ರ ಕಲಾಮಂದಿರದಲ್ಲಿ ಜರುಗಿತು.
ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ವ್ಯವಸ್ಥಾಪಕರಾದ ಡಾ. ಆಶೋಕ್ ಪ್ರಭು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ʼಪ್ರಸ್ತುತ ಕಾಲದಲ್ಲಿ ಕೊಂಕಣಿ ಭಾಷೆಯನ್ನು ಬಳಸುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಕೊಂಕಣಿ ಮಾತಾನಾಡುವುದನ್ನು ಮನೆಯಿಂದಲೇ ಪ್ರಾರಂಭಿಸಬೇಕು. ಆಗ ಮಾತ್ರ ಕೊಂಕಣಿ ಭಾಷೆಯನ್ನು ಬೆಳೆಸಬಹುದುʼ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಕರ್ನಾಟಕ ಸರ್ಕಾರವು ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದ ಬೆಳವಣಿಗಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಚನೆ ಮಾಡಿದೆ. ಅಕಾಡೆಮಿಯು ಜನರ ಹತ್ತಿರ ಹೋಗಿ, ಜನರಿಗೆ ಅಕಾಡೆಮಿಯ ಬಗ್ಗೆ ಪರಿಚಯಿಸಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದಲ್ಲಿ ದುಡಿದವರನ್ನು ಹತ್ತಿರ ತರಲು ಪ್ರಯತ್ನಿಸುತ್ತಿದೆʼ ಎಂದರು.
ಮುಖ್ಯ ಅತಿಥಿಯಾದ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ. ವೈ. ಉಮಾನಾಥ ಶೆಣೈ ಅವರು ಕೊಂಕಣಿ ಮೂಡಿ ಬಂದ ದಾರಿ, ಕೊಂಕಣಿ ಇತಿಹಾಸದ ಬಗ್ಗೆ ನಡೆಸಿದ ಅಧ್ಯಯನದ ಬಗ್ಗೆ ಮಾತಾನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಕಾಡೆಮಿಯ ಸಾಹಿತ್ಯ ಸಂಭ್ರಮʼ ಕಾರ್ಯಕ್ರಮದಲ್ಲಿ ಕೊಂಕಣಿಯ ಹಿರಿಯ ಸಂಗೀತಗಾರರಾದ ಪಾಂಡುರಂಗ ನಾಯಕ್ರೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಲಾವಿದರಾದ ಕೃಷ್ಣಾನಂದ ನಾಯಕ್ರವರು ಸಂವಾದ ನಡೆಸಿದರು.
ಪಾಂಡುರಂಗ ನಾಯಕ್ರವರು ಸಂಗೀತದಲ್ಲಿ ಅವರ ಆಸಕ್ತಿ, ಸಂಗೀತ ಕ್ಷೇತ್ರದಲ್ಲಿ ಬೆಳೆದು ಬಂದ ರೀತಿ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಆಹಾರೋತ್ಸವ, ಕರಕುಶಲ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಅಂತ್ಯದಲ್ಲಿ ʼಪಾಟ್ಟೊ ನಾತ್ತಿಲ್ಲೆ ರೈಲ್ʼ ಹಾಸ್ಯ ನಾಟಕ ಪ್ರದರ್ಶನವಾಯಿತು.
ಅಕಾಡೆಮಿಯು ಪ್ರತಿ ತಿಂಗಳಿನಲ್ಲಿ ಓರ್ವ ಸಾಹಿತಿಯನ್ನು ಸನ್ಮಾನಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಯಾಧ ಉಲ್ಲಾಸ್ ಕೆ. ಪೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಪ್ರತಿಭಾವಂತರಿನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿಯ ಅಧ್ಯಕ್ಷರಾದ ವಿದ್ಯಾ ಎಮ್. ಭಟ್, ಅಕಾಡೆಮಿ ಸದಸ್ಯರಾದ ಸಮರ್ಥ್ ಭಟ್, ನವೀನ್ ಲೋಬೊ ಹಾಜರಿದ್ದರು. ಪೂರ್ಣಿಮಾ ಮಲ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾ ಭಟ್ ವಂದನಾರ್ಪಣೆ ಗೈದರು.