Site icon Kundapra.com ಕುಂದಾಪ್ರ ಡಾಟ್ ಕಾಂ

ರಿತನ್ಯ ಎಸ್. ಆಚಾರ್ಯಗೆ ʼಸೂಪರ್ ಟ್ಯಾಲೆಂಟೆಡ್ ಕಿಡ್ʼ ಪುರಸ್ಕಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕಮಲಶಿಲೆಯ ಪುಟಾಣಿ ರಿತನ್ಯ ಎಸ್. ಆಚಾರ್ಯಗೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್” ಬಿರುದನ್ನು ನೀಡಿ, “ಒನ್ ಇನ್ ಎ ಮಿಲಿಯನ್” ಎಂದು ಗೌರವಿಸಿದೆ.

ಕಮಲಶಿಲೆಯ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ತುಂಬಾ ಚಿಕ್ಕ ವಯಸ್ಸಿನಿಂದಲೇ ರಿತನ್ಯ ವಿಶೇಷ ಕುತೂಹಲ ಮತ್ತು ಕಲಿಕೆಯ ತವಕ ತೋರಿಸುತ್ತಿದ್ದಳು. ಅವಳಲ್ಲಿದ್ದ ಪ್ರತಿಭೆಯನ್ನು ಪೋಷಕರು ತಕ್ಷಣ ಗಮನಿಸಿ, ಅವಳಿಗೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ.

ರಿತನ್ಯ ಈಗಾಗಲೇ ಫ್ಲಾಶ್‌ಕಾರ್ಡ್‌ಗಳ ಮೂಲಕ 21 ವಿಧದ ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 6 ಕೀಟಗಳು, 20 ಹಣ್ಣುಗಳು, 23 ತರಕಾರಿಗಳು, 10 ಜಲಜ ಪ್ರಾಣಿಗಳು, 10 ವಾಹನಗಳು ಹಾಗೂ 65 ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಸರಿಯಾಗಿ ಗುರುತಿಸಿ ಹೆಸರು ಹೇಳುವ ಸಾಮರ್ಥ್ಯ ತೋರಿದ್ದಾಳೆ.

ಅಷ್ಟೇ ಅಲ್ಲದೆ, 30ಕ್ಕೂ ಹೆಚ್ಚು ವಸ್ತುಗಳನ್ನು ಹುಡುಕಿ ತಂದಿಡುವುದು, 6 ವಿಧದ ಆಜ್ಞೆಗಳನ್ನು ಪಾಲಿಸುವುದು, 8 ವಿಧದ ಸಾಕುಪ್ರಾಣಿಗಳ ಧ್ವನಿಗಳನ್ನು ಅನುಕರಿಸುವುದು ಹಾಗೂ ಕೇವಲ 2 ನಿಮಿಷ 40 ಸೆಕೆಂಡ್‌ಗಳಲ್ಲಿ 35 ಮೆಟ್ಟಿಲುಗಳನ್ನು ಸಹಾಯವಿಲ್ಲದೆ ಏರಿರುವ ಮೂಲಕ ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.

ಈ ಸಾಧನೆಯನ್ನು ಪರಿಗಣಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ 2025ರ ಜುಲೈ 10ರಂದು ಅವಳಿಗೆ “ಸೂಪರ್ ಟ್ಯಾಲೆಂಟೆಡ್ ಕಿಡ್” ಬಿರುದನ್ನು ನೀಡಿ, “ಒನ್ ಇನ್ ಎ ಮಿಲಿಯನ್” ಎಂದು ಗೌರವಿಸಿದೆ.

ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಂದೆ ಸುಧಾಕರ ಆಚಾರ್ಯ ಹಾಗೂ ತಾಯಿ ಸುಚೇತಾ ಅವರು — “ನಾವು ಮಗಳಲ್ಲಿರುವ ಪ್ರತಿಭೆಯನ್ನು ಬಹಳ ಚಿಕ್ಕ ವಯಸ್ಸಿನಿಂದಲೇ ಗಮನಿಸಿದ್ದೇವೆ. ಅವಳ ಕನಸುಗಳನ್ನು ನನಸು ಮಾಡಲು ನಾವು ಸದಾ ಅವಳೊಂದಿಗೆ ನಿಂತುಕೊಳ್ಳುತ್ತೇವೆ. ಈ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version