Site icon Kundapra.com ಕುಂದಾಪ್ರ ಡಾಟ್ ಕಾಂ

ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆ ಹೆಚ್ಚಿಸಿ, ಉದ್ಯಮ ವಿಸ್ತರಿಸಲು ಅರಿವು ಕಾರ್ಯಕ್ರಮಗಳು ಸಹಕಾರಿ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ದೇಶದ ಆರ್ಥಿಕ ವ್ಯವಸ್ಥೆ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳು ಮಹತ್ತರ ಪಾತ್ರ ವಹಿಸುತ್ತವೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಅವರುಗಳಲ್ಲಿ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಉದ್ಯಮವನ್ನು ವಿಸ್ತರಿಸಲು ಅರಿವು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಅವರು ಅಂದು ನಗರದ ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆ.ಸಿ.ಟಿ.ಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್) ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರ್ಯಾಂಪ್ ಯೋಜನೆಯಡಿ ಟ್ರೇಡ್ಸ್ ಯೋಜನೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗಾರಿಕೆಗಳ ಹೊಸ ಘಟಕ ಸ್ಥಾಪನೆಗೆ ಹಾಗೂ ಕೈಗಾರಿಕೆಗಳ ಉನ್ನತೀಕರಣಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಇವುಗಳ ಪ್ರಯೋಜನವನ್ನು ಉದ್ದಿಮೆದಾರರು ಪಡೆಯುವುದರೊಂದಿಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು. ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು, ನವನವೀನ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಯಲ್ಲಿ ಅವಶ್ಯವಿರುವ ವಸ್ತುಗಳ ಉತ್ಪಾದನೆಗೆ ಹಾಗೂ ಪಾರಂಪರಿಕ ಉದ್ಯಮಗಳಿಗೆ ಹೊಸ ರೂಪ ನೀಡಲು ಯುವಜನರು ಮುಂದಾಗಬೇಕು ಎಂದರು.

ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಕಾಪುವಿನಲ್ಲಿ ಹೊಸ ಕೈಗಾರಿಕಾ ಘಟಕ ಸ್ಥಾಪನೆಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಜಿಲ್ಲೆಯ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಉದ್ಯಮದಾರರು ತಾವು ಮಾಹಿತಿ ಹೊಂದುವುದರೊಂದಿಗೆ ನೆರೆ-ಹೊರೆಯ ಉದ್ಯಮಿಗಳೊಂದಿಗೆ ಮಾಹಿತಿ ಹಂಚಿಕೊಂಡು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ಘಟಕ ಸ್ಥಾಪನೆಗೆ ಮುಂದಾಗಬೇಕು ಎಂದ ಅವರು, ಜಿಲ್ಲೆಯಲ್ಲಿ ಉದ್ಯಮಗಳು ಬೆಳೆದಂತೆ ಸ್ಥಳೀಯ ಜನರಿಗೆ ಉದ್ಯೋಗ ದೊರಕುವುದರೊಂದಿಗೆ ನಗರಗಳತ್ತ ಉದ್ಯೋಗ ಅರಸಿ ತೆರಳುವವರ ಸಂಖ್ಯೆ ಕಡಿಮೆಯಾಗಲಿದೆ ಎಂದರು. 

ಇಂದಿನ ಡಿಜಿಟಲ್ ಯುಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳನ್ನು ಎದುರಿಸಿ ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಉದ್ದಿಮೆದಾರರು ಬೆಳೆಯಬೇಕು. ಎಂ.ಎಸ್.ಎಂ.ಇ ಗಳು ಎದುರಿಸುತ್ತಿರುವ ಕ್ರೆಡಿಟ್ ಸವಾಲುಗಳನ್ನು ಪರಿಹರಿಸಲು ಟ್ರೇಡ್ ಸಿಸ್ಟಮ್ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ಟೆಕ್ಸಾಕ್ ಸಿ.ಇ.ಓ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20 ರ ಕೋವಿಡ್ ಸಮಯದಲ್ಲಿ ಸಣ್ಣ ಕೈಗಾರಿಕೆಗಳು ಸ್ಥಗಿತಗೊಳ್ಳುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅದನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕ್ ರ್ಯಾಂಪ್‌ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಹಸ್ತ ನೀಡಿತು. ಕೈಗಾರಿಕೆಗಳು ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ನಡೆಸಿಕೊಂಡು ಹೋಗಲು ಉದ್ಯಮಿಗಳು ಟ್ರೇಡ್ಸ್ನಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದ ಅವರು, ಕೈಗಾರಿಕೆಗಳನ್ನು ಪ್ರಾರಂಭಿಸುವಾಗ ಪರಿಸರಕ್ಕೆ ಹಾನಿಯಾಗದಂತೆ ಉದ್ಯಮ ಕೈಗೊಳ್ಳಲು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬಾಲಕೃಷ್ಣ, ಪಿ.ಪಿ ಸಿಂಗ್ ಹಾಗೂ ಜಯಾಶೆಟ್ಟಿ ಟ್ರೇಡ್ ರಿಸಿವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ ಹಾಗೂ ಎನ್ವಿರಾನಮೆಂಟ್ ಅಂಡ್ ಸೋಶಿಯಲ್ ಮ್ಯಾನೆಜ್‌ಮೆಂಟ್ ಸಪೋರ್ಟ್ ಫಾರ್ ಎಂ.ಎಸ್.ಎಂ.ಇ (ಇ.ಎಸ್.ಎಂ) ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಮಂಗಳೂರು ಸಿ.ಐ.ಐ ಚೇರ್‌ಮೆನ್ ನಟರಾಜ್ ಹೆಗ್ಡೆ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉದ್ದಿಮೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ, ನಾಯಕ್ ಸ್ವಾಗತಿಸಿ, ಉಡುಪಿ ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ್ ನಿರೂಪಿಸಿ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.

Exit mobile version