ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನ ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ ಉದಯ ಚಾತ್ರ (43) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಿದ್ದಾಪುರ ಚಾತ್ರ ಎಂಟರ್‌ಪೈಸಸ್ ಮಾಲಕರಾಗಿರುವ ಉದಯ ಚಾತ್ರ ಅವರು ಬುಧವಾರ ಬೆಳಿಗ್ಗೆ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು ಸಿದ್ದಾಪುರದಲ್ಲಿರುವ ಚಾತ್ರ ಎಂಟರ್‌ಪೈಸಸ್‌ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ ಕಮಲಶಿಲೆಯಿಂದ ತನ್ನ ಅಂಗಡಿಗೆ ಹೋಗದೆ ನೇರವಾಗಿ ಮನೆಗೆ ಹೋಗಿ ಮಹಡಿ ಮೇಲಿನ ಕೋಣೆಗೆ ತೆರಳಿ ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬಿಕರು ಸಂಘದ ಸಭೆ ಮುಗಿಸಿ ಮನೆಗೆ ಮರಳಿದಾಗ ಅವರ ವಾಹನ ಅಲ್ಲೇ ಇರುವುದರಿಂದ ಮನೆಯ ಸುತ್ತಮುತ್ತ ಹಾಗೂ ಒಳಗೆ ಹುಡುಕಾಟ ನಡೆಸಿ ನಂತರ ಮಹಡಿಯ ಕೋಣೆಗೆ ಹೋಗಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

