Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಸರ್ವ ಸದಸ್ಯರ ಸಾಮಾನ್ಯ ಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ 2024-5ನೇ ಸಾಲಿನ ವರ್ಷಾಂತ್ಯಕ್ಕೆ ಒಟ್ಟು 13325 ಸದಸ್ಯರನ್ನು ಮತ್ತು 1.79 ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. 39.35 ಕೋಟಿ ಠೇವಣಿಯನ್ನು ಹೊಂದಿದ್ದು, 19.63 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಸಹಕಾರಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಬ್ಯಾಂಕ್ 30.36 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9 ಪಾಲು ಮುನಾಫೆ ನೀಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ರಾಮ ಮಂದಿರದ ಸಭಾಭವನದಲ್ಲಿ ಶುಕ್ರವಾರ ಜರಗಿದ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ 2024-25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಹಕರಿಗೆ ತ್ವರಿತ ಮತ್ತು ಉತ್ತಮ ಸೇವೆ ನೀಡಲು ಶ್ರಮಿಸಲಾಗುವುದು. ಹೊರಬಾಕಿ ಸಾಲ ವಸೂಲಾತಿಗೆ ಕ್ರಮಕೈಗೊಂಡು ಬ್ಯಾಂಕ್ ಹೆಚ್ಚಿನ ಲಾಭ ಗಳಿಸಲು ಪ್ರಯತ್ನಿಸಲಾಗುವುದು. ಬ್ಯಾಂಕಿನ ಮೂರು ಶಾಖೆಗಳಲ್ಲಿ ಗ್ರಾಹಕರಿಗೆ ಅಗತ್ಯವಿರುವ ಬ್ಯಾಂಕಿಂಗ್ ಸೌಲಭ್ಯ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಪಾಧ್ಯಕ್ಷ ವಾಸುದೇವ ಶೇರುಗಾರ್, ನಿರ್ದೇಶಕರಾದ ಶ್ರೀನಿವಾಸ ಜತ್ತನ್, ಹರೀಶ ಮೇಸ್ತ, ಕೆ.ಮಾಧವ ಖಾರ್ವಿ, ಜಿ.ಗೋಪಾಲ ನಾಯ್ಕ್, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ ಡಿ.ಹೆಗ್ಡೆ, ನಾಗರಾಜ ಎಂ., ಲಕ್ಷ್ಮಣ ಉಪಸ್ಥಿತರಿದ್ದರು.

ಹಿರಿಯ ಗುಮಾಸ್ತ ಜಗದೀಶ ಎನ್.ಪೂಜಾರಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ (ಪ್ರಭಾರ) ರಾಜ್‌ಗೋಪಾಲ ಪೂಜಾರಿ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version