ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ಪರಿಶುದ್ಧ ಆಹಾರ ಸೇವನೆ ಬದುಕಿನ ಎಲ್ಲ ಹಂತಗಳಲ್ಲೂ ವ್ಯಕ್ತಿಗಳ ಮೊದಲ ಆದ್ಯತೆಯಾಗಿರುತ್ತದೆ. ಇಂಥ ಆಹಾರ ಪದಾರ್ಥಗಳನ್ನು ಶ್ರಮವಹಿಸಿ ಜನರಿಗೆ ತಲುಪಿಸುವ ಗುರುತರ ಜವಾಬ್ದಾರಿಯಿಂದ ಕೃಷಿಕಾಯಕದ ಬಗ್ಗೆ ಮತ್ತು ರೈತರು ಅನುಸರಿಸುವ ಸುರಕ್ಷಿತ ಆಧುನಿಕ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಇರಬೇಕು” ಎಂದು ಪ್ರಗತಿ ಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಹೇಳಿದರು.
ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ರಿ., ಬೆಚ್ಚಳ್ಳಿಯ ಸಹಭಾಗಿತ್ವದಲ್ಲಿ ಆಯೋಜಿಸಿದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಮಾತನಾಡಿ, ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲದಿದ್ದರೂ ಜೀವನದ ಪ್ರಮುಖ ಭಾಗವಾಗಿಸಿ ಕಾಳಜಿ ತೋರಿಸಲು ಸಾಧ್ಯವಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿನಿಯರು ಕೃಷಿಗೀತೆಯನ್ನು ಹಾಡಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದೀಪಾ ಶೆಟ್ಟಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ ಧನ್ಯವಾದ ಸಲ್ಲಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

