ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘ ಸಂಘವು ಪ್ರಧಾನ ಕಚೇರಿ ಸೇರಿದಂತೆ 9 ಶಾಖೆಗಳ ಮೂಲಕ 7 ಗ್ರಾಮಗಳ ಜನತೆಗೆ ಆರ್ಥಿಕ ವ್ಯವಹಾರ ಕಲ್ಪಿಸಿ, ಪ್ರಸಕ್ತ ಸಾಲಿನಲ್ಲಿ ಸುಮಾರು 853.49 ಕೋಟಿಗೂ ಮೀರಿ ವ್ಯವಹಾರ ನಡೆಸಿ, ಸುಮಾರು 1.03 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು.

ಅವರು ಯಡ್ತರೆ ಜೆ.ಎನ್.ಆರ್. ಸಭಾಭವನದಲ್ಲಿ ಸೋಮವಾರ ನಡೆದ ಸಂಘದ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಠೇವಣಾತಿ ಅವಿರತವಾಗಿ ಏರುತ್ತಿದ್ದು, ವರದಿ ವರ್ಷದಲ್ಲಿ ಸುಮಾರು 6.29 ಕೋಟಿ ರೂ. ಏರಿಕೆಯಾಗಿದ್ದು, ಶೇ. 8.84ರಷ್ಟು ಹೆಚ್ಚಳವಾಗಿದೆ. ವರದಿ ವರ್ಷದ ಪ್ರಾರಂಭದಲ್ಲಿ ಸುಮಾರು 63.15ಕೋಟಿ ರೂ. ಹೊರಬಾಕಿ ಸಾಲವಿದ್ದು, ಪ್ರಸಕ್ತ ಸಾಲಿನಲ್ಲಿ 72.01ಕೋಟಿ ರೂ. ಸಾಲ ವಿತರಿಸಲಾಗಿದೆ. ವರ್ಷಾಂತ್ಯದಲ್ಲಿ ಸದಸ್ಯರಿಂದ ಬರಬೇಕಾದ ಸಾಲಗಳ ಪೈಕಿ ಕೃಷಿ ಪೂರಕ ಸಾಲ ಶೇ. 99.67, ಕೃಷಿಯೇತರ ಸಾಲ ಶೇ. 99.62 ವಸೂಲಿಯಾಗಿ ಒಟ್ಟಾರೆ ಶೇ. 99.85 ಸಾಲ ವಸೂಲಿಯಾಗಿದೆ ಎಂದರು.
ಠೇವಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವರ್ಷ 100 ಕೋಟಿ ರೂ, ಠೇವಣೆ ಸಂಗ್ರಹಣೆಯ ಗುರಿಹೊಂದಲಾಗಿದೆ. ಸಂಘದ ಪ್ರಧಾನ ಕಚೇರಿಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಸಂಘದ ಉಳಿದ ಶಾಖೆಗಳಿಗೂ ನಿವೇಶನ ಖರೀದಿಸಿ, ನೂತನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭ ಪ್ರಗತಿಪರ ಕೃಷಿಕರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಎಸ್. ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಎಂ.ಎಚ್. ಗುರುದತ್ತ, ಹೆರಿಯ ದೇವಾಡಿಗ, ಚಿಕ್ಕು ಪೂಜಾರಿ, ಎನ್. ನಾಗರಾಜ ಶೆಟ್ಟಿ, ಸತೀಶ್ ಯಡ್ತರೆ, ಶಂಕರ ನಾಯ್ಕ್, ಜ್ಯೋತಿ, ಎಚ್. ವಿಜಯಾ ಶೇರುಗಾರ್, ಟಿ. ಬಾಬು ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಆಡಳಿತ ಮಂಡಳಿಯ ಸದಸ್ಯರುಗಳಾದ ಸದಾಶಿವ ಡಿ. ಪಡುವರಿ ಸ್ವಾಗತಿಸಿ, ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರತಾಪಚಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.