Site icon Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಪಿ.ಯು. ಕಾಲೇಜಿನಲ್ಲಿ ಭಾರತೀಯ ಕರಾವಳಿ ರಕ್ಷಕ ಪಡೆ ಇನ್ಸ್‌ಪೆಕ್ಟರ್ ಜನರಲ್ ದಾಸೀಲರ ವಿಶೇಷ ಉಪನ್ಯಾಸ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಇಂದಿನ ಜಾಗತಿಕ ಯುಗದಲ್ಲಿ ವಿದ್ಯಾಭ್ಯಾಸದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ. ಸಮಾಜದಲ್ಲಿ ಬದಲಾವಣೆ ತರಲು, ಹೊಸ ಅವಕಾಶಗಳನ್ನು ಸೃಷ್ಟಿಸಲು, ಮತ್ತೊಬ್ಬರಿಗೆ ಜೀವನೋಪಾಯ ಕಲ್ಪಿಸಲು ನಾವು ಉದ್ಯೋಗದಾತರಾಗಬೇಕು ಎಂದು ಪುದುಚೇರಿಯ ಕರಾವಳಿ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಸುರೇಂದ್ರ ಸಿಂಗ್ ದಾಸೀಲರು ನುಡಿದರು.

ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಉದ್ಯೋಗವನ್ನು ಮಾತ್ರ ಕನಸು ಕಾಣದೆ, ಸಮಾಜಕ್ಕೆ ಹೊಸ ಉದ್ಯೋಗಾವಕಾಶಗಳನ್ನು ನೀಡಬಲ್ಲ ನಾಯಕರಾಗಿ ರೂಪುಗೊಳ್ಳಬೇಕು. ನಾಯಕತ್ವದ ನಿಜವಾದ ಅರ್ಥವು ಸಂಕಷ್ಟದ ಸಂದರ್ಭಗಳಲ್ಲಿ ಸಹಾನುಭೂತಿಯೊಂದಿಗೆ ನಡೆದುಕೊಳ್ಳುವುದರಲ್ಲಿ ಅಡಗಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಸದಾ ಆತ್ಮ ವಿಶ್ವಾಸದಿಂದಿರಬೇಕು. ತಮಗೆ ತಾವೇ ಪ್ರೋತ್ಸಾಹ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೀಳರಿಮೆ ಬೆಳೆಸದೆ, ತಮ್ಮ ಬೆನ್ನನ್ನು ತಾವೇ ತಟ್ಟುತ್ತಾ ಮುಂದೆ ಸಾಗುವುದು ಸಾಧನೆಯ ರಹಸ್ಯವಾಗಿದೆ.  ಮಾನಸಿಕ, ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಆರೋಗ್ಯಗಳ ಕಡೆಗೆ ಪ್ರಾಮುಖ್ಯತೆಯನ್ನು ನೀಡಿ. ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ನಿರ್ಮಾಣದ ಅವಧಿ. ಈ ಹಂತದಲ್ಲಿ ನೈತಿಕ ಮೌಲ್ಯಗಳು, ದೇಶಭಕ್ತಿ, ಶಿಸ್ತು, ಸಮಯಪಾಲನೆ ಮತ್ತು ಸಮಾಜಮುಖಿ ಮನೋಭಾವವನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ನೀವು ಯಾವ ಕ್ಷೇತ್ರಕ್ಕೂ ಹೋದರೂ ಸಾಧನೆ ಖಚಿತ ಎಂದರು.  

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅದ್ಯಕ್ಷತೆ ವಹಿಸಿ ಮಾತನಾಡಿದರು.   ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮೊಹಮ್ಮದ್ ಸದಾಕತ್, ಉಪ ಪ್ರಾಂಶುಪಾಲೆ ಝಾನ್ಸಿ ಪಿಎನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಬಿತಾ ಮೋನಿಸ್ ಇದ್ದರು. 

Exit mobile version