ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಸಿಇಟಿ ಮತ್ತು ಎನ್‌ಇಇಟಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆದು ವೈಯುಕ್ತಿಕ ಆಯ್ಕೆಯ ಕಾಲೇಜುಗಳನ್ನು ಉನ್ನತ ವ್ಯಾಸಂಗಕ್ಕೆ ಆಯ್ದುಕೊಳ್ಳುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದು ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಿ. ವಸಂತ್ ಆಚಾರ್ಯ ಹೇಳಿದರು.
ಅವರು ಇಲ್ಲಿನ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಆಯೋಜಿಸಿದ ‘ ಕೆಮಿವರ್ಸ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ವ್ಯಾಪಕ ಪಠ್ಯಕ್ರಮವಿರುವ ರಸಾಯನ ಶಾಸ್ತ್ರ ವಿಷಯದಲ್ಲಿ ಹೆಚ್ಚು ಒತ್ತು ನೀಡುವ ಓರ್ಗಾನಿಕ್ ರಿಯಾಕ್ಷನ್ ಗಳಂಥ ಕೆಲವು ಅಧ್ಯಾಯಗಳು ವಿದ್ಯಾರ್ಥಿಗಳಿಗೆ ಬಹುಬೇಡಿಕೆಯ ರಾಸಾಯನಿಕ ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ಉದ್ಯೋಗ ಪಡೆಯುವಲ್ಲಿ ಸಹಾಯಕವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸ ಕಾರ್ಯಕ್ರಮದ ಬಳಿಕ ನಡೆದ ಸಂವಾದ ಮತ್ತು ಅಭಿಪ್ರಾಯ ಹಂಚಿಕೆ ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಶೈನೋಲ್, ಅಮೂಲ್ಯ ಹಾಗೂ ಡಿಯೋನ್ ಡಿಸೋಝಾ ತಮ್ಮ ಪ್ರತಿಕ್ರಿಯೆ ಮಂಡಿಸಿದರು.
ರಸಾಯನ ಶಾಸ್ತ್ರ ಉಪನ್ಯಾಸಕಿ ರೇವತಿ ಕಾಮತ್ ಅತಿಥಿಗಳನ್ನು ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಾನೀಸ್ ನತಾಷಾ ಡಿಸೋಝಾ ಧನ್ಯವಾದ ಸಲ್ಲಿಸಿದರು.

