ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಯಾವುದೇ ವಿಪತ್ತು ಎದುರಾದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಸ್ವಯಂ ಸ್ಪೂರ್ತಿಯಿಂದ ನಿಷ್ಪಕ್ಷಪಾತದಿಂದ ತಾರತಮ್ಯವಿಲ್ಲದೇ ಪ್ರಪಂಚದಾದ್ಯಂತ ಅಗತ್ಯವಿರುವ ಸೇವೆ ನೀಡುತ್ತಾರೆ ಎಂದು ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೇ ಸಹವರ್ತಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಕಲಿಯಬೇಕು ಎಂದರು.
ಕುಂದಾಪುರ ತಾಲೂಕು ವಲಯದ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಸಯೋಜಕರಾದ ದಿನಕರ್ ಆರ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳು ಸಮಾಜದ ಋಣವನ್ನು ತೀರಿಸುವಲ್ಲಿ ತಮ್ಮಿಂದಾದ ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವಿದ್ಯಾರ್ಥಿಗಳು ಇತರರಿಗೆ ಸಕಾಲದಲ್ಲಿ ನೆರವು ನೀಡುವ ನಿಸ್ವಾರ್ಥ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಇಂಡಿಯನ್ ರೆಡ್ ಕ್ರಾಸ್, ಕುಂದಾಪುರ ಘಟಕದ ವತಿಯಿಂದ ಕಾಲೇಜಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು.
ಇಂಗ್ಲೀಷ್ ಉಪನ್ಯಾಸಕಿ ರೂಪಾ ಜಿ. ಪಾಲಂಕರ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥನೆ ಹಾಡಿದರು. ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

