Kundapra.com ಕುಂದಾಪ್ರ ಡಾಟ್ ಕಾಂ

ಸೇವಾ ಪಾಕ್ಷಿಕದ ಅಂಗವಾಗಿ ಬೈಂದೂರು ಬಿಜೆಪಿ ಯುವಮೋರ್ಚಾದಿಂದ ರಕ್ತದಾನ ಶಿಬಿರ ಆಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸೇವಾ ಪಾಕ್ಷಿಕದ ಅಂಗವಾಗಿ ದೇಶಾದ್ಯಂತ ಬಿಜೆಪಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿಸಿದ್ದು, ಅದರ ಭಾಗವಾಗಿ ಬೈಂದೂರು ಕ್ಷೇತ್ರದಲ್ಲಿಯೂ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ರಕ್ತದಾನದಂತಹ ಮಹತ್ತರ ಕಾರ್ಯಕ್ಕೆ ನೇತೃತ್ವ ವಹಿಸುವ ಮೂಲಕ ಬೈಂದೂರು ಬಿಜೆಪಿ ಯುವಮೋರ್ಚಾ ಸ್ಮರಣೀಯ ಕಾರ್ಯಕ್ರಮವನ್ನು ಮಾಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಯುವಮೋರ್ಚಾ ಬೈಂದೂರು ನೇತೃತ್ವದಲ್ಲಿ ಸೇವಾ ಪಾಕ್ಷಿಕ – ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರದ ಸಹಯೋಗದೊಂದಿಗೆ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಪ್ರಧಾನ ಕಾರ್ಯದರ್ಶಿಗಳಾದ ಕರಣ್ ಪೂಜಾರಿ, ಗೋಪಾಲ ವಸ್ರೆ, ಮುಖಂಡ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ವೇಣುಗೋಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ್, ರೆಡ್ ಕ್ರಾಸ್ ಕುಂದಾಪುರದ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್, ಅಜಿನೋರಾ ಸಂಸ್ಥೆಯ ಶಿಶಿರ್, ರಕ್ತದಾನಿ ರಾಘವೇಂದ್ರ ನೆಂಪು ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್, ಪ್ರಶಾಂತ್ ತಲ್ಲೂರು ಹಾಗೂ ಅಜಿನೋರಾ ಸಂಸ್ಥೆಯ ಶಿಶಿರ್ ಅವರನ್ನು ಸನ್ಮಾನಿಸಲಾಯಿತು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Exit mobile version