ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2ರ ವತಿಯಿಂದ ಪ್ರಥಮ ವರ್ಷ ಪದವಿಯ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಅಭಿವಿನ್ಯಾಸ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.
ಎನ್‌ಎಸ್‌ಎಸ್‌ನ ವಾರ್ಷಿಕ ಚಟುವಟಿಗೆಗಳ ಉದ್ಘಾಟನೆಯನ್ನು ಸ್ಥಳೀಯ ಉದ್ಯಮಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಮಾಜಮುಖಿ ಚಟುವಟಿಕೆಗಳಿಗೆ ಎನ್‌ಎಸ್‌ಎಸ್ ವೇದಿಕೆಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರವೀಣ ಶೆಟ್ಟಿ ಅವರು ಎನ್‌ಎಸ್‌ಎಸ್‌ನ ಸ್ಥಾಪನೆ, ಧ್ಯೇಯೋದ್ದೇಶ ಮತ್ತು ಅದರ ಕಾರ್ಯ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿ, ವ್ಯಕ್ತಿಯನ್ನು ಸಮುದಾಯದ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ಮಾಡುವುದೇ ಶಿಕ್ಷಣದ ಗುರಿ. ಈ ಗುರಿಯನ್ನು ತಲುಪಲು ಎನ್‌ಎಸ್‌ಎಸ್ ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಶ್ರಮದ ತತ್ವದ ಮೇಲೆ ನಂಬಿಕೆ ಇಟ್ಟು ಕಾರ್ಯ ನಿರ್ವಹಿಸುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾಗಲು ಬೇಕಾದ ಮೌಲ್ಯ ಮತ್ತು ಕೌಶಲಗಳನ್ನು ಕಲಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ 2025-26ನೇ ನೇ ಸಾಲಿಗೆ ಎನ್‌ಎಸ್‌ಎಸ್ ವಿದ್ಯಾರ್ಥಿ ಪ್ರತಿನಿಧಿಗಳನ್ನಾಗಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ರೂಪೇಶ್, ಅಕ್ಷಯ್, ವನಿಶಾ, ಶ್ರೇಯಾ ಅವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಗಾಂಧೀಜಿಯವರನ್ನು ಗಾಢವಾಗಿ ಪ್ರಭಾವಿಸಿದ ಜಾನ್ ರಸ್ಕಿನ್ ಅವರ ಅನ್ ಟು ದಿಸ್ ಲಾಸ್ಟ್ ಪುಸ್ತಕದ ಸಾಲುಗಳನ್ನು ಭಿತ್ತಿ ಪತ್ರಿಕೆಯಾಗಿ ವಿಸ್ಯಾಸಗೊಳಿಸಿ, ಅದನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಎನ್‌ಎಸ್‌ಎಸ್ ಘಟಕ 1 ಮತ್ತು 2 ಸಂಯೋಜನಾಧಿಕಾರಿ ಶ್ರತಿ ಆಚಾರ್ಯ ಎನ್ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ನಿರಂಜನ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸಜನಿ ನಿರೂಪಿಸಿ, ಸುಷ್ಮಾ ವಂದಿಸಿದರು.
ಮೆಂಟರ್ಸ್ ಫಾರ್ ಕಿಡ್ಸ್ ಫೌಂಡೇಶನ್, ಈ ಸಂಸ್ಥೆಯು ವಿವಿಧ ಸರ್ಟಿಫಿಕೇಟ್ ಪ್ರೋಗ್ರಾಂಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಈ ಅವಕಾಶದ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ, ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ತಿಳಿಸಿದರು.