Kundapra.com ಕುಂದಾಪ್ರ ಡಾಟ್ ಕಾಂ

ಕಾರ್ಟೂನಿನಲ್ಲಿ ಕಲೆ, ಸಾಹಿತ್ಯ ಏಕಕಾಲಕ್ಕೆ ಅಭಿವ್ಯಕ್ತಗೊಳ್ಳುತ್ತದೆ: ರಂಗಕರ್ಮಿ ಸುರೇಶ್ ಆನಗಳ್ಳಿ

ಕುಂದಾಪುರ: ಸಾಹಿತ್ಯ ಮತ್ತು ಚಿತ್ರಕಲೆಯ ಮೂಲಕ ಏಕಕಾಲದಲ್ಲಿ ಜನರಿಗೆ ನಾಟುವ ಶಕ್ತಿ ಇರುವುದು ಕಾರ್ಟೂನಿಗೆ ಮಾತ್ರ. ಕಲಾತ್ಮಕ, ಸಾರ್ವಕಾಲಿಕ ಹಾಗೂ ತಕ್ಷಣಕ್ಕೆ ಸ್ಪಂದಿಸುವಂತೆ ಮಾಡುವ ಗುಣ ಇದರಲ್ಲಿದೆ ಎಂದು ರಂಗಕರ್ಮಿ ಸುರೇಶ್ ಆನಗಳ್ಳಿ ಹೇಳಿದರು

ಅವರು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾದ ’ಕಾರ್ಟೂನು ಹಬ್ಬ’ದ ಮೂರನೇ ದಿನ ’ಮಾಸ್ಟರ್ ಸ್ಟ್ರೋಕ್ಸ್’ – ವ್ಯಂಗ್ಯಚಿತ್ರಕಾರರೊಂದಿಗಿನ ಸಂವಾದ ಉದ್ಘಾಟಿಸಿ ಮಾತನಾಡಿದರು. ಕಾರ್ಟೂನು ಕಲೆಯನ್ನು ಚಳುವಳಿಯ ಹಾಗೆ ಬೆಳೆಸುತ್ತಾ ಅಧ್ಯಯನ ಶಿಸ್ತಿಗೆ ಒಳಪಡಿಸುವುದಕ್ಕೆ ಅಡಿಪಾಯವನ್ನು ಸತೀಶ್ ಆಚಾರ‍್ಯ ಹಾಕುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಕಂಡಿದ್ದ ಕಾರ್ಟೂನು ಕಾಳಜಿ ಮತ್ತೆ ಕಾಣುವಂತಾಗಿದೆ ಎಂದವರು ಶ್ಲಾಘಿಸಿದರು.

ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿ ಕಾರ್ಟೂನು ಸಮಾಜವನ್ನು ಕೆರಳಿಸುವ ಬದಲಿಗೆ ಅರಳಿಸುವ ಕೆಲಸ ಮಾಡುತ್ತದೆ. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಅದನ್ನು ಒಪ್ಪುವ ಮತ್ತು ತಿದ್ದಿಕೊಳ್ಳುವ ಬದ್ಧತೆ ನಮ್ಮಲ್ಲಿರಬೇಕು ಎಂದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಉಪಸ್ಥಿತರಿದ್ದರು. ವ್ಯಂಗಚಿತ್ರಕಾರರಾದ ಪಿ. ಮಹಮ್ಮದ್, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ‍್ಯ ಮಾಸ್ಟರ್‌ಸ್ಟ್ರೋಕ್ಸ್‌ನಲ್ಲಿ ಭಾಗವಹಿಸಿದ್ದರು. ಬಳಿಕ ವ್ಯಂಗ್ಯಚಿತ್ರಕಾರರು, ಪತ್ರಕರ್ತರು ಹಾಗೂ ಚಿಂತಕರುಗಳೊಂದಿಗೆ ಸಂವಾದ ನಡೆಯಿತು.

Exit mobile version