ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ವರ್ಡ್‌ಪ್ರೆಸ್ ಉಡುಪಿ ಸಮುದಾಯದ ಸಹಯೋಗದಲ್ಲಿ ಎರಡು ದಿನಗಳ ʼವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ʼ ಶಿಬಿರವು ಯಶಸ್ವಿಯಾಗಿ ಜರುಗಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಒಟ್ಟು 120 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದು, ವರ್ಡ್‌ಪ್ರೆಸ್ ಬಳಸಿ ವೆಬ್‌ಸೈಟ್ ನಿರ್ಮಾಣದ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳು ಮುಕ್ತ ತಂತ್ರಜ್ಞಾನಗಳ ಸಹಾಯದಿಂದ ಹೊಸ ಸೃಜನಾತ್ಮಕ ಪ್ರಯತ್ನಗಳಿಗೆ ಕೈಹಾಕಬೇಕು ಎಂದು ಪ್ರೇರೇಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಗಣೇಶ್ ಕೆ. ಅವರ ಮಾರ್ಗದರ್ಶನದಲ್ಲಿ ವಿಜಯಲಕ್ಷ್ಮಿ ಎನ್. ಶೆಟ್ಟಿ, ರಾಮಚಂದ್ರ ಆಚಾರಿ, ಹಾಗೂ ಚೇತನಾ (ಕಾರ್ಯಕ್ರಮ ಸಂಯೋಜಕಿ) ಅವರು ಶ್ರಮಿಸಿದರು.
ವರ್ಡ್‌ಪ್ರೆಸ್ ಉಡುಪಿ ತಂಡದಿಂದ ಶಶಿಕಾಂತ್ ಶೆಟ್ಟಿ (ಸ್ಥಾಪಕ, SabWeb), ಕೆ. ಕೀರ್ತಿ ಪ್ರಭು (ಸೀನಿಯರ್ ಟೆಸ್ಟರ್, QualityKiosk, ಮುಂಬೈ), ಹಾಗೂ ವಿ. ಗೌತಮ್ ನಾವಡ (ಸ್ಥಾಪಕ ಮತ್ತು ನಿರ್ದೇಶಕ, ForthFocus) ಶಿಬಿರವನ್ನು ಮುನ್ನಡೆಸಿದರು. ಕಾರ್ಯಕ್ರಮದ ನಿರ್ವಹಣೆಗೆ ಓಂಕರ ಉಡುಪ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, Kotisoft Solutions, ಕೋಟೇಶ್ವರ), ಮಂಜುನಾಥ ಎಂ. ಎಂ. (ಸ್ಥಾಪಕ, Yuktha Digitals, ತೀರ್ಥಹಳ್ಳಿ), ಹಾಗೂ ಚಂದನಾ ಜಿ. ಎಂ. (ಕಾರ್ಯನಿರ್ವಹಣಾ ನಿರ್ವಾಹಕಿ, ForthFocus) ಅವರು ಸಹಕಾರ ನೀಡಿದರು.
ತರಬೇತಿಯಲ್ಲಿ, ವಿನ್ಯಾಸದ ಮೂಲ ಅಂಶಗಳಿಂದ ಹಿಡಿದು ಪ್ರಕಟಣೆ ಹಂತದವರೆಗೆ — ವರ್ಡ್‌ಪ್ರೆಸ್‌ನ ಸಂಪೂರ್ಣ ಕಾರ್ಯವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಎರಡು ದಿನಗಳ ತರಬೇತಿ ಶಿಬಿರದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ನಿರ್ಮಿಸಲಾದ 120 ಹೊಸ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಪ್ರಕಟಗೊಂಡವು.

