ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಅದೆಷ್ಟೇ ಆವಿಷ್ಕಾರ, ಸಂಶೋಧನೆಗಳು ನಡೆದರೂ ರಕ್ತವನ್ನು ಮಾತ್ರ ಸಂಶೋಧಿಸಲು ಈವರೆಗೆ ಸಾಧ್ಯವಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ ಹೊರತು ಬೇರೊಂದಿಲ್ಲ ಎಂದು ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಹೇಳಿದರು.
ಅವರು ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಗಂಗೊಳ್ಳಿ ಇವರ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಜನ್ಮ ದಿನೋತ್ಸವದ ಅಂಗವಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತವನ್ನು ಪೂರೈಕೆ ಮಾಡಿ ರೋಗಿಯ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತ ರಕ್ತದಾನ ಮಾಡಿ ರೋಗಿಗಳ ಪ್ರಾಣ ಉಳಿಸುವ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಕ್ತನಿಧಿ ಕೇಂದ್ರ ಕುಂದಾಪುರ ಇದರ ಸುಜಯಾ ಮಾತನಾಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಜಿ. ವೆಂಕಟೇಶ ನಾಯಕ್ ಉಪಸ್ಥಿತರಿದ್ದರು.
ಪತ್ರಕರ್ತ ಬಿ. ರಾಘವೇಂದ್ರ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ದೇವಳದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವಸ್ಥಾನದ ವ್ಯವಸ್ಥಾಪಕ ಬಿ. ಗಣೇಶ ಶೆಣೈ ಸಹಕರಿಸಿದರು. ಎನ್. ಅಶ್ವಿನ್ ನಾಯಕ್ ವಂದಿಸಿದರು.

