Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸ.ವಿ ಹಿರಿಯ ಪ್ರಾಥಮಿಕ ಶಾಲೆ: ಉಚಿತ ಯೋಗ ತರಬೇತಿ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ
: ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಕಾರಣದಿಂದ ಅನೇಕ ರೋಗಗಳು ನಮ್ಮನ್ನು ಸುತ್ತಿಕೊಳ್ಳುತ್ತಿದೆ. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಹಾಗೂ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದ ಮಹತ್ವನ್ನು ಅರಿತು, ಯೋಗವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದರು.

ಅವರು ಜೇಸಿಐ ಗಂಗೊಳ್ಳಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 15 ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗಂಗೊಳ್ಳಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮೊಹಮ್ಮದ್ ನೂರ್ ಫಾಜಿಲ್ ಮತ್ತು ಯೋಗ ತರಬೇತುದಾರ ಸುಕೇಶ್ ಆಚಾರ್ಯ ಶುಭ ಹಾರೈಸಿದರು.

ಇದೇ ಸಂದರ್ಭ ಪ್ರತಿಭಾವಂತ ಕೊಳಲು ವಾದಕ ಶ್ಯಾಮ್ ಜಿ. ಪೂಜಾರಿ ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮೊಹಮ್ಮದ್ ರಶ್ದಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೇಸಿಐ ಕಾರ್ಯದರ್ಶಿ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ಉಪಸ್ಥಿತರಿದ್ದರು.

ಶಿಕ್ಷಕಿ ಅಕ್ಷತಾ ಮತ್ತು ಮಹಮ್ಮದ್ ಹುಸೇನ್ ಸನ್ಮಾನಿತರನ್ನು ಪರಿಚಯಿಸಿದರು. ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಕೃಷ್ಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಮಾಲಾಶ್ರೀ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಜೇಸಿಐ ಗಂಗೊಳ್ಳಿ ಅಧ್ಯಕ್ಷ ರೋಶನ್ ಖಾರ್ವಿ ವಂದಿಸಿದರು.

Exit mobile version