Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು, ಓರ್ವ ಪ್ರಾಣಾಪಾಯದಿಂದ ಪಾರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲುವಿನಲ್ಲಿ ನಡೆದಿದೆ. ಹೊಸಹಿತ್ಲು ಮಕ್ಕಿತಾರು ನಿವಾಸಿಗಳಾದ ಉದಯ ದೇವಾಡಿಗ ಎಂಬುವವರ ಪುತ್ರ ಆಶಿಶ್‌ ದೇವಾಡಿಗ (15), ಮಾರುತಿ ಪೂಜಾರಿ ಅವರ ಪುತ್ರ ಸೂರಜ್‌ ಪೂಜಾರಿ (16), ಸುಧಾಕರ ದೇವಾಡಿಗ ಅವರ ಪುತ್ರ ಸಂಕೇತ್‌ ದೇವಾಡಿಗ (18) ಮೃತ ದುರ್ದೈವಿಗಳು. ಆಶಿಶ್‌ ದೇವಾಡಿಗನ ಸಹೋದರ ಕೌಶಿಕ್‌ ದೇವಾಡಿಗ (18) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು ಸಂಜೆಯ ವೇಳೆಗೆ ಈಜಲು ತೆರಳಿದ್ದು, ಈ ವೇಳೆ ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ ದಿಕ್ಕಾಪಾಲಾಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿಹೋಗಿದ್ದರೇ, ಓರ್ವ ಹರಸಾಹಸಪಟ್ಟು ದಡಕ್ಕೆ ಸೇರಿಕೊಂಡಿದ್ದಾನೆ. ಮೃತಪಟ್ಟ ವಿದ್ಯಾರ್ಥಿಗಳಾದ ಆಶಿಶ್‌ ದೇವಾಡಿಗ ಕಿರಿಮಂಜೇಶ್ವರ ಹೈಸ್ಕೂಲಿನಲ್ಲಿ 9ನೇ ತರಗತಿ, ಸೂರಜ್‌ ಪೂಜಾರಿ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೇ, ಸಂಕೇತ್‌ ದೇವಾಡಿಗ ಬೈಂದೂರು ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದರು. ನಾಲ್ವರು ಸ್ನೇಹಿತರು ಒಟ್ಟಾಗಿ ಸಮುದ್ರ ತೀರಕ್ಕೆ ತೆರಳಿದ್ದಾರೆ. ಈ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ವಿದ್ಯಾರ್ಥಿಗಳ ಪತ್ತೆಗೆ ಮುಂದಾಗಿದ್ದಾರೆ. ಮುಳುಗುತಜ್ಞರು ಹಾಗೂ ಸ್ಥಳೀಯರು ಬಾಲಕರನ್ನು ಪತ್ತೆಮಾಡಿ ದಡಕ್ಕೆ ತಂದಿದ್ದಾರೆ. ಅಷ್ಟರಲ್ಲೇ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಕುಟುಂಬಿಕರ ರೋಧನ ಮುಗಿಲುಮುಟ್ಟಿದೆ.

ಮೃತ ಬಾಲಜ ಮೃತದೇಹವನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೈಂದೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ವಂದಿಗಳು ಪತ್ತೆ ಕಾರ್ಯಕ್ಕೆ ಸಹಕರಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ಇನ್ನಷ್ಟೇ ದಾಖಲಾಗಬೇಕಿದೆ.

Exit mobile version