Site icon Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಬೈಂದೂರು – ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ: ನಾಟಕ ತಂಡಗಳಿಗೆ ಭಾಗವಹಿಸಲು ಆಹ್ವಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಾಜ್ಯದ ಹೆಸರಾಂತ ಸಾಂಸ್ಕೃತಿಕ ಸಂಸ್ಥೆಯಾದ ಸುರಭಿ ರಿ. ಬೈಂದೂರು ತನ್ನ 25ನೇ ವರ್ಷದ ರಜತಯಾನದ ಪ್ರಯುಕ್ತ ಡಿಸೆಂಬರ್ ತಿಂಗಳ 3ನೇ ವಾರದಲ್ಲಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಆಯೋಜಿಸಿದೆ. ನಾಟಕ ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಜಿಲ್ಲೆಯ (ಕಾಸರಗೋಡು ಸಹಿತ)  ಹವ್ಯಾಸಿ ನಾಟಕ ತಂಡಗಳು ಭಾಗವಹಿಸಲು ಮುಕ್ತ ಅವಕಾಶವಿದೆ.

ಸ್ಪರ್ಧಾ ವಿವರಗಳು:

ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಠ 01 ಘಂಟೆ 30ನಿಮಿಷದ ಹಾಗೂ ಗರಿಷ್ಠ 02 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಸ್ಫರ್ಧೆಗೆ ಗರಿಷ್ಠ 8 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ 40,000/-ರೂ 30,000/- ರೂ 20,000/- ದ ನಗದು ಬಹುಮಾನಗಳನ್ನು ಹಾಗೂ ಶಾಶ್ವತ ಫಲಕಗಳನ್ನು ನೀಡಲಾಗುವುದು. ಅಲ್ಲದೇ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು ರಂಗಪರಿಕರ, ಪ್ರಸಾಧನ, ಬಾಲನಟನೆಗೆ ನಗದು ಸಹಿತ

ಬಹುಮಾನ ನೀಡಲಾಗುವುದು.

ಸ್ಫರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಬೈಂದೂರಿಗೆ ಬಂದು ಹೋಗುವ ಪ್ರಯಾಣದ ವೆಚ್ಚವನ್ನು (ಪ್ರಯಾಣದ ಅಂತರವನ್ನು ನಿರ್ಧರಿಸಿ) ನೀಡಲಾಗುವುದು.  ಹಾಗೂ ಪ್ರತಿ ತಂಡಕ್ಕೆ ಗೌರವಧನವಾಗಿ ರೂ.5,000 ವನ್ನು ನೀಡಲಾಗುವುದು.

ಭರ್ತಿ ಮಾಡಿದ ಪ್ರವೇಶ ಪತ್ರ ಸ್ವೀಕರಿಸಲು 10 ನವೆಂಬರ್ 2025, ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ತಂಡಗಳು ಸುರಭಿಯ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು (8217779338), ನಿಕಟಪೂರ್ವ ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ (9343743340) ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸತ್ಯನಾ ಕೊಡೇರಿ (9110641355)ಇವರನ್ನು ಸಂಪರ್ಕಿಸುವಂತೆ ಸುರಭಿ ಅಧ್ಯಕ್ಷರಾದ ಆನಂದ ಮದ್ದೋಡಿ, ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯ ನಿಯಮಾವಳಿಗಳು:

1.  ಕರ್ನಾಟಕ ರಾಜ್ಯದ ಮತ್ತು ಕಾಸರಗೋಡು ಜಿಲ್ಲೆಯ ಹವ್ಯಾಸಿ ನಾಟಕ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

2. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಡಿಸೆಂಬರ್ 3ನೇ ವಾರದಲ್ಲಿ ಆರಂಭಿಸುವ ಉದ್ದೇಶವಿದೆ.

3. ರಂಗಮಂಟಪದ ಅಳತೆಯು 40 ಅಡಿ ಉದ್ದ 24 ಅಡಿ ಅಗಲವಾಗಿರುತ್ತದೆ.

4. ಸಾಮಾಜಿಕ, ಜಾನಪದ, ಪೌರಾಣಿಕ ಯಾ ಚಾರಿತ್ರಿಕ ಕಥಾವಸ್ತುಗಳಲ್ಲಿ ಆಧುನಿಕ ಪ್ರಜ್ಞೆ ಮೂಡಿಸುವ ಸೃಜನಶೀಲ ನಾಟಕಗಳನ್ನು ಅಭಿನಯಿಸಲು ಅವಕಾಶವಿದೆ. ಹೊಸ ನಾಟಕಗಳಿಗೆ ಆದ್ಯತೆ ನೀಡಲಾಗುವುದು.

5. ಪ್ರವೇಶ ಪತ್ರದೊಂದಿಗೆ ಪ್ರವೇಶ ಶುಲ್ಕ ರೂ 5,000/-ವನ್ನು ಸುರಭಿ ರಿ. ಬೈಂದೂರು (Surabhi R Byndoor  ಈ ಹೆಸರಿಗೆ ಕ್ರಾಸ್ ಮಾಡಿದ ಹಾಗೂ ಬೈಂದೂರಿನಲ್ಲಿ ಪಾವತಿಯಾಗುವಂತೆ ರಾಷ್ಟ್ರೀಕೃತ ಬ್ಯಾಂಕ್ ಡ್ರಾಪ್ಟ್‌ನ್ನು ಕಡ್ಡಾಯವಾಗಿ ಲಗ್ತೀಕರಿಸಬೇಕು.

   * ಚೆಕ್ ಮೂಲಕ ಪ್ರವೇಶ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.

   * ಪ್ರವೇಶ ಶುಲ್ಕವನ್ನು ಲಗ್ತೀಕರಿಸದ ಪ್ರವೇಶ ಪತ್ರವನ್ನು ಪರಿಗಣಿಸುವುದಿಲ್ಲ.

   * ಅಸ್ವೀಕೃತ ಸ್ಪರ್ಧಾ ತಂಡಗಳ ಪ್ರವೇಶ ಶುಲ್ಕವನ್ನು ಹಿಂದಿರುಗಿಸಲಾಗುವುದು. 

   * ಸ್ವೀಕೃತ ತಂಡಗಳ ಪ್ರವೇಶ ಶುಲ್ಕವನ್ನು ಆಯಾ ದಿನದ ನಾಟಕಾಭಿನಯ ಮುಗಿದ ಕೂಡಲೇ ನಗದಾಗಿ ಮರುಪಾವತಿ

    ಮಾಡಲಾಗುವುದು.

6. ನಾಟಕದ ಅವಧಿ ಕನಿಷ್ಠ ಒಂದೂವರೆ ತಾಸು, ಗರಿಷ್ಠ ಎರಡೂ ಕಾಲು ತಾಸುಗಳಿಗೆ ಪರಿಮಿತವಾಗಿರಬೇಕು. ಈ ನಿಯಮವನ್ನು ಮೀರುವ ನಾಟಕಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಅವಧಿ ತಲುಪುದ ಅಥವಾ ಅವಧಿ ಮೀರಿದ ನಾಟಕಗಳು ಸ್ಪರ್ಧೆಯ ಯಾವುದೇ ಬಹುಮಾನಗಳಿಗೆ ಪರಿಗಣಿಸಲಾಗುವುದಿಲ್ಲ.

7. ಪ್ರದರ್ಶನಕ್ಕೆ ಅಗತ್ಯವಾದ ಎರಡು ಫ್ಲೈನ್ ಪರದೆಗಳನ್ನು, ಧ್ವನಿವರ್ಧಕಗಳನ್ನು ಮತ್ತು ರಂಗಸಜ್ಜಿಕೆಗೆ ಬೇಕಾಗುವ ಕೆಲವು ಮರದ ಫ್ಲಾಟ್ ಫೋರ್ಮ್‌ಗಳನ್ನು ಸ್ಪರ್ಧಾ ಸಮಿತಿಯು ಒದಗಿಸುತ್ತದೆ. ವಿಶೇಷ ರಂಗಪರಿಕರ, ವೇಷಭೂಷಣ ಇತ್ಯಾದಿಗಳನ್ನು ಸ್ಪರ್ಧಾ ತಂಡವೇ ಪೂರೈಸಿಕೊಳ್ಳಬೇಕು. ಬೆಳಕಿನ ವ್ಯವಸ್ಥೆಗೆ ನಮ್ಮಲ್ಲಿ ಲಭ್ಯವಿರುವ ಸ್ಪಾಟ್ ಲೈಟುಗಳು, ಮತ್ತು ಡಿಮ್ಮರುಗಳನ್ನು ಉಚಿತವಾಗಿ ಒದಗಿಸಲಾಗುವುದು. ಈ ವಿವರಗಳನ್ನು  ಅನಂತರ ತಿಳಿಸಲಾಗುವುದು. ಹೆಚ್ಚಿನ ಬೆಳಕಿನ ವ್ಯವಸ್ಥೆಗಳನ್ನು ಸ್ಪರ್ಧಾ ತಂಡವೇ ಮಾಡಿಕೊಳ್ಳಬೇಕು.

8. ಅಭಿನಯಿಸುವ ನಾಟಕದ ಗ್ರಂಥ ಕರ್ತೃವಿಗೆ ಗೌರವಧನ ಸಲ್ಲಿಸಿ, ಅವರಿಂದ ನಾಟಕ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯುವುದು. ಸ್ಪರ್ಧಾತಂಡದ ಹೊಣೆಯಾಗಿರುತ್ತದೆ. ನಾಟಕ ಕರ್ತೃವಿನ ಅನುಮತಿ ಪತ್ರವನ್ನು ನಾಟಕ ಪ್ರದರ್ಶನಕ್ಕೆ ಮೊದಲು ಸ್ಪರ್ಧಾ ಸಮಿತಿಗೆ ಕಡ್ಡಾಯವಾಗಿ ನೀಡಬೇಕು.

9. ಒಂದು ಸಂಸ್ಥೆ ಒಂದಕ್ಕಿಂತ ಹೆಚ್ಚು ನಾಟಕಗಳನ್ನು ಪ್ರದರ್ಶಿಸಲು ಮತ್ತು ಒಬ್ಬ ನಿರ್ದೇಶಕ, ಕಲಾವಿದ ಯಾ ಕಲಾವಿದೆ(ಲೈಟ್ ಸಂಗೀತ ಆಪರೇಟರ್ ಮತ್ತು ಪ್ರಸಾಧನ ಕಲಾವಿದರನ್ನು ಹೊರತುಪಡಿಸಿ) ಒಂದಕ್ಕಿಂತ ಹೆಚ್ಚು ನಾಟಕಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ನಾಟಕ ಕೃತಿಯ ಒಂದು ಪ್ರತಿಯೊಂದಿಗೆ ಕಡ್ಡಾಯವಾಗಿ ಲಗ್ತೀಕರಿಸಬೇಕು.

11. ಪರಸ್ಥಳದ ತಂಡಗಳಿಗೆ ಅಗತ್ಯವಿದ್ದರೆ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳುವ ಸ್ಥಳಾವಕಾಶವನ್ನು ಉಚಿತವಾಗಿ ಒದಗಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ರೂ 5,000/- ಗೌರವಧನ ನೀಡಲಾಗುವುದು. ಪ್ರಯಾಣದ ಅಂತರಕ್ಕೆ ಅನುಗುಣವಾಗಿ ಪ್ರಯಾಣ ವೆಚ್ಚವನ್ನು ನೀಡಲಾಗುವುದು.

12. ಸ್ಪರ್ಧಾ ನಾಟಕದಲ್ಲಿ ಧ್ವನಿಮುದ್ರಿತ ಸಂಭಾಷಣೆಗಳನ್ನು ಮತ್ತು ಸಂಗೀತವನ್ನು (ಹಿನ್ನಲೆ ವಿಶಿಷ್ಠ ಧ್ವನಿ ಪ್ರಕಾರಗಳನ್ನು ಹೊರತುಪಡಿಸಿ) ಬಳಸುವುದಕ್ಕೆ ಅವಕಾಶವಿಲ್ಲ.

13. ಪ್ರವೇಶ ಪತ್ರವನ್ನು ಸ್ವೀಕರಿಸಲು ಕೊನೆಯ ದಿನಾಂಕ 10, ನವೆಂಬರ್ 2024. ಆ ನಂತರ ಬಂದ ಪ್ರವೇಶ ಪತ್ರಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಸ್ಪರ್ಧೇಗೆ ಗರಿಷ್ಠ ೮ ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.

14. ಸ್ಪರ್ಧೆಗೆ ನಾಟಕಗಳನ್ನು ಆಯ್ಕೆ ಮಾಡುವ ಅಥವಾ ಯಾವುದೇ ಕಾರಣ ನೀಡದೆ ತಿರಸ್ಕರಿಸುವ ಸಂಪೂರ್ಣ ಹಕ್ಕು ಸ್ಪರ್ಧಾ ಸಮಿತಿಗೆ ಸೇರಿದೆ. ಆಯ್ಕೆಯಾದ ತಂಡಗಳಿಗೆ ಪತ್ರ ಮುಖೇನ ತಿಳಿಸಲಾಗುವುದು.

15. ಸ್ಪರ್ಧಾ ಸಮಿತಿಯಿಂದ ಆಯ್ಕೆಗೊಂಡ ಯಾವುದೇ ತಂಡವು ನಿಶ್ಚಿತ ದಿನದಂದು ತನ್ನ ನಾಟಕವನ್ನು ಪ್ರದರ್ಶಿಸಲು ಒಪ್ಪಿಕೊಂಡ ಬಳಿಕ ಮತ್ತೆ  ಹಿಂಪಡೆಯಲು ಅವಕಾಶವಿಲ್ಲ. ಹಿಂಪಡೆದಲ್ಲಿ ಅವರ ಪ್ರವೇಶ ಶುಲ್ಕವನ್ನು ಮರಳಿಸಲಾಗುವುದಿಲ್ಲ.

16. ಆಯ್ಕೆಗೊಂಡ ಸ್ಪರ್ಧಾ ನಾಟಕಗಳ ಪ್ರದರ್ಶನ ದಿನಾಂಕವನ್ನು ಬದಲಾಯಿಸುವುದಕ್ಕೆ ಅವಕಾಶವಿಲ್ಲ.

17. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ನಾಟಕದ ಮರುಪ್ರದರ್ಶನವನ್ನು ಬಹುಮಾನ ವಿತರಣಾ ಸಮಾರಂಭದ ಸಂದರ್ಭದಲ್ಲಿ ಕಡ್ಡಾಯವಾಗಿ ನೀಡಬೇಕು. ಈ ಬಗ್ಗೆ ತಂಡದ ಬಸ್ ಪ್ರಯಾಣ ವೆಚ್ಚವನ್ನು ನೀಡಲಾಗುವುದು. ಅಲ್ಲದೆ ಪ್ರದರ್ಶನದ ದಿನ ಉಚಿತ ವಸತಿ, ಊಟೋಪಚಾರಗಳ ವ್ಯವಸ್ಥೆ ಮಾಡಲಾಗುವುದು.

Exit mobile version