ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಹಟ್ಟಿಅಂಗಡಿ ವಲಯ ಇವುಗಳ ಸಂಯುಕ್ತ ಆಯೋಜನೆಯಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರದಂದು ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರೌಢಾವಸ್ಥೆಯಲ್ಲೇ ಜೀವನದ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕಾದ ಜವಾಬ್ದಾರಿ ಪಾಲಕರ ಮತ್ತು ಅಧ್ಯಾಪಕರ ಹೆಗಲ ಮೇಲಿದೆ. ಮಕ್ಕಳೂ ತಮ್ಮ ಬಗ್ಗೆ ತಾವು ಅರಿತುಕೊಂಡಿರಬೇಕಾಗುತ್ತದೆ. ಮಕ್ಕಳು ಪ್ರೌಢಶಾಲೆಯಲ್ಲಿ ಇರುವಾಗಲೇ ಜೀವನಕ್ಕೆ ಸ್ಪಷ್ಟವಾದ ಗುರಿಯನ್ನು ನಿರ್ಧರಿಸಿಕೊಂಡಿರಬೇಕು. ಕೈಮುಷ್ಟಿಯಲ್ಲಿರುವ ಚಿಟ್ಟೆಯ ಭವಿಷ್ಯ ಆ ಕೈಯಲ್ಲಿರುವಂತೆ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಎನ್ನುತ್ತಾ ಪ್ರಾಪಂಚಿಕ ಘಟನೆಗಳ ಮೂಲಕ ಮಕ್ಕಳಿಗೆ ತಿಳಿ ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಆರ್.ಎನ್. ಮಂಜುನಾಥ ಅವರು ಮಾತನಾಡಿ, ತಂದೆ ತಾಯಿ ಮತ್ತು ಶಿಕ್ಷಕರು ಶ್ರಮ ತ್ಯಾಗದಿಂದ ಮಕ್ಕಳ ಜೀವನವನ್ನು ರೂಪಿಸುವರು. ನಮ್ಮ ಜೀವನ ಆರಂಭವಾದ ನಂತರ ಅವರನ್ನು ನಿರ್ಲಕ್ಷಿಸದೆ ಅವರನ್ನು ಗೌರವಾದರದಿಂದ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ ಈ ಪ್ರೌಢಾವಸ್ಥೆಯಲ್ಲಿಯೇ ಅಂತಹ ಸದ್ಗುಣಗಳನ್ನು ರೂಢಿಸಿಕೊಳ್ಳಬೇಕು. ಎಂದು ನುಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಜಗದೀಶ್ ಆಚಾರ್ಯ ಮಾತನಾಡಿ, ಈ ಶಾಲೆಯು ಒಳ್ಳೆಯ ಸಂಸ್ಕಾರ ನೀಡುತ್ತಾ ಬಂದಿದ್ದು, ಅವುಗಳನ್ನು ಮೈಗೂಡಿಸಿಕೊಳ್ಳಿ ಎಂದು ಮಕ್ಕಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಕನ್ಯಾನ ಒಕ್ಕೂಟದ ಅಧ್ಯಕ್ಷರಾದ ದೇವೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಟ್ಟಿಅಂಗಡಿಯ ಮೇಲ್ವಿಚಾರಕರಾದ ಸುಬ್ರಹ್ಮಣ್ಯ, ಶಾಲಾ ಶಿಕ್ಷಕ ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಹಿತ್ ಸ್ವಾಗತಿಸಿದರು. ಆಧ್ಯಾ ಶೆಟ್ಟಿ ವಂದಿಸಿದರು. ವಂಶಿ ಕಾರ್ಯಕ್ರಮವನ್ನು ನಿರ್ವಹಿಸಿದರು.

