Site icon Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನವು ದೇಹಕ್ಕೆ ಉತ್ತಮ ಆರೋಗ್ಯ ಮತ್ತು ವ್ಯಾಯಾಮವನ್ನು ಕೊಡುತ್ತದೆ: ಕಿಶನ್ ಹೆಗ್ಡೆ ಪಳ್ಳಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಯಕ್ಷಗಾನವು ಮನಸಿನ ಏಕಾಗ್ರತೆಗೆ ಅದ್ಭುತ ಔಷಧಿ ಎಂದು ಸೌಕೂರು ದೇವಸ್ಥಾನದ ಮೊಕ್ತೇಸರರು ಕಿಶನ್ ಹೆಗ್ಡೆ ಪಳ್ಳಿ ಹೇಳಿದರು

ಅವರು ಭಾನುವಾರದಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ  50ನೇ ವರ್ಷದ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಪ್ರಯುಕ್ತ ನಡೆದ ‘ಬಂಗಾರದ ಹೆಜ್ಜೆ’ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಯ ಕಳೆಯಲು ಯಕ್ಷಗಾನ ಕಲಿಯಬೇಡಿ. ಎಲ್ಲಾ ಯೋಗಾಸನಗಳ ಪರಿಚಯ ಯಕ್ಷಗಾನದಿಂದ ಸಿಗುತ್ತದೆ. ದೇಹಕ್ಕೆ ಉತ್ತಮ ಆರೋಗ್ಯ ಮತ್ತು ವ್ಯಾಯಾಮವನ್ನು ಕೊಡುತ್ತದೆ. ಅಂತೆಯೇ ಮಾನಸಿಕವಾಗಿ ಆತ್ಮ ವಿಶ್ವಾಸ ನೀಡುವುದಲ್ಲದೆ  ದೃಢರಾಗಲೂ ಸಹಕಾರಿ. ಹಾಗಾಗಿ  ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಆಡುಭಾಷೆಯ ರೂಪದಲ್ಲಿ ಜನರಿಗೆ ಅರ್ಥವಾಗುವಂತೆ ಸರಳವಾಗಿ ಉತ್ತಮ ಸಂದೇಶ ನೀಡುವ ಕಲೆ ಯಕ್ಷಗಾನ. ಅದನ್ನು ಉಳಿಸಿ ಬೆಳೆಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಉದ್ಯಮಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ನೇರಂಬಳ್ಳಿ ರಾಘವೇಂದ್ರ ರಾವ್ ಮಾತನಾಡಿ, ಈ ಅದ್ಭುತ ಯಕ್ಷಗಾನ ಕಲೆ ಇಲ್ಲಿನ ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿದೆ. ದೇವರಿಗೆ ಮತ್ತು ಜನರಿಗೆ ಮಾತಿನ ಮೂಲಕ ತಮ್ಮ ಭಕ್ತಿ ಮತ್ತು ಆರಾಧನೆಯನ್ನು ತಿಳಿಸುವ ವಿಶಿಷ್ಟ ಕಲೆ ಯಕ್ಷಗಾನ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು.

ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ, ಕಾರ್ಯಕ್ರಮ ಸಂಚಾಲಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಜೀವಶಾಸ್ತ್ರ ಉಪನ್ಯಾಸಕಿ ಡಾ. ಸರೋಜ ಎಮ್. ವಂದಿಸಿದರು.

Exit mobile version