Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ಕಾರ್ಪೊರೇಟ್ ವ್ಯವಸ್ಥೆ ಹಾಗೂ ಅದರಲ್ಲಿ ಉದ್ಯೋಗ ಪಡೆಯಬೇಕಾದಲ್ಲಿ ಬೇಕಾಗುವ ಅಗತ್ಯ ಕೌಶಲ್ಯಗಳು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.

ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾರ್ಪೊರೇಟ್ ಟ್ರೈನರ್  ಹಾಗೂ ಡಾಟಾ ಎನಾಲಿಸ್ಟ್‌ರಾದ ಗೌತಮ್ ಎಚ್. ಶೆಟ್ಟಿಗಾರ್ ಮಾತನಾಡಿ, ಯಾವುದೇ ಕೌಶಲವನ್ನು ವೃದ್ಧಿಸಿಕೊಳ್ಳಬೇಕಾದರೆ ಸೂಕ್ತ ಪ್ರಯತ್ನದ ಅವಶ್ಯಕತೆ ಇದೆ. ಪ್ರಸ್ತುತ ಯಾವ ಕೌಶಲಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಬೇಡಿಕೆ ಇದೆ ಎಂಬುದನ್ನು ಗಮನಿಸಿ ಆ ಕೌಶಲಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡು ಬಳಸಿಕೊಂಡಾಗ ಯೋಗ್ಯ ಉದ್ಯೋಗ ನಮ್ಮದಾಗಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಇಂದು ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿಗಳು ಡಿಜಿಟಲ್ ಮಾಧ್ಯಮದ ಮೂಲಕ ಶೀಘ್ರವಾಗಿ ಹಾಗೂ ಸುಲಭವಾಗಿ ಸಿಗುತ್ತಿದೆ.  ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಅಗತ್ಯವಿರುವ  ಕೌಶಲಗಳನ್ನು ಪರಿಚಯಿಸುವ ಸಲುವಾಗಿ ತರಬೇತಿ ಕಾರ್ಯಕ್ರಮಗಳನ್ನು ರಂತರವಾಗಿ  ಹಮ್ಮಿಕೊಳ್ಳಲಾಗುತ್ತಿದೆ.  ಇಂತಹ ತರಬೇತಿಗಳು ವಿವಿಧ  ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಉದ್ಯೋಗದ ಹುಡುಕಾಟಕ್ಕೆ  ಪೂರ್ವ ತಯಾರಿಯನ್ನು ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಮಾಹಿತಿ ಹಾಗೂ ಅನುಭವಗಳನ್ನು ಬಳಸಿಕೊಂಡು ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದರು.

ತರಬೇತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಘನ  ಹಾಗೂ ಲಘು ಕೌಶಲಗಳು ಹಾಗೂ ಈ ಕೌಶಲ್ಯಗಳನ್ನು  ವಿದ್ಯಾಭ್ಯಾಸದ ಸಂದರ್ಭದಲ್ಲಿ ಬೆಳೆಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.

ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ನಾಗರಾಜ ಯು., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ,  ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶೇಖರ ಬಿ, ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ ಉಪಸ್ಥಿತರಿದ್ದರು. 

ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌತಮಿ ಸ್ವಾಗತಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಗೌರೀಶ್  ವಂದಿಸಿದರು. 

Exit mobile version