Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕಾಶೀ ಮಠಾಧೀಶರಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ʼಗೊಂಬೆ ಮ್ಯೂಜಿಯಂʼ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪರಮಾದರಣೀಯ ಶ್ರೀ ಕಾಶೀಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ಗೊಂಬೆ ಮ್ಯೂಜಿಯಂ (ವಸ್ತು ಸಂಗ್ರಹಾಲಯ) ಉದ್ಘಾಟನೆ ಮಾಡಿದರು.

ಅಕಾಡೆಮಿಯ ವತಿಯಿಂದ ಸ್ವಾಮೀಜಿ ಅವರಿಗೆ ಪಾದ ಪೂಜೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ  ಬೆಂಗಳೂರು ಸೆಂಚುರಿ ಬಿಲ್ಡರ್ಸ್‌ ನಿರ್ದೇಶಕರಾಗಿರುವ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ  ಮೋಹಿನಿ ಡಿ. ಪೈ. ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version