Site icon Kundapra.com ಕುಂದಾಪ್ರ ಡಾಟ್ ಕಾಂ

ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ

ಗಂಗೊಳ್ಳಿ: ವಿದ್ಯಾರ್ಥಿ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅವಶ್ಯಕ. ವಿದ್ಯಾರ್ಥಿಗಳು ಯಾವುದನ್ನು ಕಷ್ಟ ಎಂದು ತಿಳಿಯದೆ ಮನಸ್ಸಿಟ್ಟು ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಾವು ಒಳ್ಳೆಯವರಾಗಿದ್ದರೆ ಕೆಟ್ಟವರು ಕೂಡ ನಮ್ಮಲ್ಲಿನ ಒಳ್ಳೆಯ ಗುಣಗಳಿಂದ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಗಂಗೊಳ್ಳಿಯ ಎಂ.ಮಾಧವ ವಿ. ಪೈ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯ. ಉತ್ತಮ ಇತಿಹಾಸ ಹೊಂದಿರುವ ಗಂಗೊಳ್ಳಿಯ ಎಸ್.ವಿ.ವಿದ್ಯಾಸಂಸ್ಥೆಗಳು ಈ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.

ಜಿ.ಎಸ್.ವಿ.ಎಸ್.ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಶಿವಾನಂದ ಪೂಜಾರಿ ಶುಭಾಶಂಸನೆಗೈದರು. ಇದೇ ಸಂದರ್ಭ ಶಾಲೆಯ ಉತ್ತಮ ಆದರ್ಶ ವಿದ್ಯಾರ್ಥಿಗಳಾದ ಚೈತ್ರಾ ಶ್ಯಾನುಭಾಗ್ ಹಾಗೂ ಪ್ರಕಾಶ ಪೈ ಅವರನ್ನು ಗೌರವಿಸಲಾಯಿತು. ದೆಹಲಿಯ ಪರೇಡ್‌ನಲ್ಲಿ ಭಾಗವಹಿಸಿದ್ದ ಶಾಲೆಯ ಎನ್‌ಸಿಸಿ ಕೆಡೆಟ್ ವೈಷ್ಣವಿ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಎಂ.ಮಾಯಾ ಎಂ.ಪೈ ಬಹುಮಾನ ವಿತರಿಸಿದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ ರಾಮಚಂದ್ರ ನಾಯಕ್ ಸ್ವಸ್ತಿವಾಚನಗೈದರು. ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ತಾ, ಶಾಲಾ ವಿದ್ಯಾರ್ಥಿ ನಾಯಕ ಶ್ರೀನಿಧಿ ಉಪಸ್ಥಿತರಿದ್ದರು.

ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ವರದಿ ವಾಚಿಸಿದರು. ವಿದ್ಯಾರ್ಥಿನಿ ನಿಶಾ ಸಂದೇಶ ವಾಚಿಸಿದರು. ವಿದ್ಯಾರ್ಥಿಗಳಾದ ಸಹನಾ ಮತ್ತು ಮಲ್ಲಿಕ್ ಅತಿಥಿಗಳನ್ನು ಹಾಗೂ ಲೆಮಿಶ್ ಮತ್ತು ಪ್ರಥ್ವಿಶ್ರೀ ಗೌರವಿತರನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ಗೋಪಾಲ್ ಮತ್ತು ಚೈತ್ರಾ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸುಪ್ರೀತಾ ವಂದಿಸಿದರು.

Exit mobile version