ಕೊಲ್ಲೂರು: ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂಬ ನೆಲೆಯಲ್ಲಿ ಸರಕಾರವು ಹಲವಾರು ಯೋಜನೆಗಳು, ಹೆಚ್ಚಿನ ಅನುದಾನ, ಪ್ರೇರಕ ವಿಷಯಗಳನ್ನು ಅಳವಡಿಸಿ ಕಾರ್ಯತಂತ್ರ ರೂಪಿಸಿದೆ. ಸಮಾಜದಲ್ಲಿ ಸಾಮರಸ್ಯದ ಬದುಕು ಕಾಣಬೇಕಾದರೆ ಶಿಕ್ಷಣದ ಅಗತ್ಯತೆಯಿದೆ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು.
ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಆಂಗ್ಲ ಮಾಧ್ಯಮದ ಭರಾಟೆಯಿಂದ ಆಕರ್ಷಿತರಾಗಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಕೀಳರಿಮೆ ಸಲ್ಲದು. ಮಾತೃಭಾಷೆ ಪ್ರಧಾನವಾಗಿದ್ದು, ವಿದ್ಯಾ ಸಂಸ್ಥೆಗಳಲ್ಲಿ ರೂಪುಗೊಂಡ ವಿದ್ಯಾರ್ಥಿಗಳನ್ನು ನಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಲ್ಲದೇ ಸತ್ಯವನ್ನು ವಿಮರ್ಶೆ ಮಾಡುವ ಮನಸ್ಥಿತಿಯ ಮೂಲಕ ಮಕ್ಕಳು ಬೆಳೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಪ್ರತೀ ತರಗತಿಯಲ್ಲಿ ಶೇ.೧೦೦ ಹಾಜರಾತಿ ಹೊಂದಿದ ವಿದ್ಯಾರ್ಥಿಗಳಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ. ಸುಮಿತ್ರಾ ಇವರಿಗೆ ಸನ್ಮಾನಿಸಲಾಯಿತು. ಆರ್ಥಿಕ ಸಮಿತಿ ಅಧ್ಯಕ್ಷ ಕೆ.ಎ.ಶಾಜಿ, ನಿವೃತ್ತ ಶಿಕ್ಷಕ ಕೆ. ಶ್ರೀನಿವಾಸ ಭಟ್, ಹಳೆ ವಿದ್ಯಾರ್ಥಿನಿ ರೇಖಾ ಹೆಗಡೆ, ವಂಡ್ಸೆ ವೃತ್ತ ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸತ್ಯನಾರಾಯಣ ಅಡಿಗ, ವಿದ್ಯಾರ್ಥಿ ನಾಯಕ ನಿರಂಜನ್ ಅಡಿಗ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಕೆ. ಮಾಲತಿ ವರದಿ ವಾಚಿಸಿದರು. ಉಷಾ ಸ್ವಾಗತಿಸಿ, ರಾಘವೇಂದ್ರ ಮತ್ತು ನಿರ್ಮಲ ನಿರೂಪಿಸಿದರು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ, ಕೊಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ ಅಧ್ಯಕ್ಷತೆವಹಿಸಿದ್ದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಆರ್.ಉಮಾ ಧ್ವಜಾರೋಹಣ ಮಾಡಿದರು. ರಾತ್ರಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.