ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ ‘ವಿಕ್ಟರಿ-2025’ ಕಾಲೇಜು ಆಡಿಟೋರಿಯಂನಲ್ಲಿ ಜರುಗಿತು.
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡ ಈ ಸಾಂಸ್ಕೃತಿಕ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಗೆದ್ದರೆ ಆತ್ಮವಿಶ್ವಾಸ ಮೂಡಿಸುತ್ತದೆ ನಿಜ ಆದರೆ ಸೋತರೇ ಹತಾಶರಾಗಬೇಡಿ. ನಿಮ್ಮ ಭವಿಷ್ಯದ ಹಾದಿಗೆ ಈ ಸ್ಪರ್ಧೆ ಮಹತ್ವದ ಮೈಲುಗಲ್ಲು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ಹಿರಿಯ ರಸಾಯನಶಾಸ್ತ್ರ ಉಪನ್ಯಾಸಕರಾದ ರಮಾಕಾಂತ್ ರೇವಣಕರ್, ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ವೆಂಕಟರಮಣ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಶೈಕ್ಷಣಿಕ, ಕಲಾತ್ಮಕ ಹಾಗೂ ನಾಯಕತ್ವದ ಕೌಶಲ್ಯ ಪ್ರದರ್ಶಿಸಲು ಒಂದು ಉತ್ತಮ ವೇದಿಕೆ ಕಲ್ಪಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಕಾಲೇಜು ಹಮ್ಮಿಕೊಂಡಿದೆ.
ಒಟ್ಟು 8 ವಿಧದ ಸ್ಪರ್ಧೆಗಳು ಈ ಕಾರ್ಯಕ್ರಮದಲ್ಲಿದ್ದು ಶಾಲಾ ವಿದ್ಯಾರ್ಥಿಗಳ ಕುಶಲತೆಗೆ ಇಂಬು ನೀಡುವಂತೆ ರೂಪಿಸಲಾದ ಈ ಸ್ಪರ್ಧೆಗೆ 27 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಿದ್ಧಿ ವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ ಚಾಂಪಿಯನ್ ಸ್ಥಾನವನ್ನು ಅಲಂಕರಿಸಿದರೆ, ಸಂದೀಪನ್ ಆಂಗ್ಲ ಮಾದ್ಯಮ ಶಾಲೆ ನಾಗೂರು ದ್ವಿತೀಯ ಸ್ಥಾನ, ಸೇಕ್ರೆಡ್ ಹಾರ್ಟ್ ಸ್ಕೂಲ್ ಜಡ್ಕಲ್ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ 15,555 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 11,111 ರೂ. ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನವಾಗಿ 7, 777 ರೂ. ನಗದು ಹಾಗೂ ಟ್ರೋಫಿ ವಿತರಿಸಲಾಯಿತು.
ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಸೌಮ್ಯ ಕುಂದರ್ ಅತಿಥಿಗಳನ್ನು ಪರಿಚಯಿಸಿ, ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್ ವಂದಿಸಿದರು.

