Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಕೊಡೇರಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ಬಂದರಿಗೆ ಮೂಲಸೌಕರ್ಯ ಕಲ್ಪಿಸುವಂತೆ ವಿಜಯ ಕರ್ನಾಟಕ ನ.2ರಂದು ವಿಶೇಷ ವರದಿ ಪ್ರಕಟಿಸಿತ್ತು.

ಕರಾವಳಿಯ ಮೂರು ಜಿಲ್ಲೆಯ ವ್ಯಾಪ್ತಿಯ ಅತಿ ಹೆಚ್ಚು ನಾಡದೋಣಿಗಳನ್ನು ಹೊಂದಿರುವ ಈ ಬಂದರು ಮೂಲ ಸೌಕರ್ಯದ ಕೊರತೆಯಿಂದಾಗಿ ಮೀನುಗಾರರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಮೀನುಗಾರ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿ, ಕೊಡೇರಿ ಮತ್ತು ಉಪ್ಪುಂದ ಭಾಗದ ಮೀನುಗಾರರು ಸಂಘಟಿತರಾಗಿ ಸಮನ್ವಯ ಸಾಧಿಸಿಕೊಂಡಾಗ ಬಂದರು ಪ್ರದೇಶದಲ್ಲಿ ಎಲ್ಲಾ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಎರಡು ಭಾಗದ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ್ಪುಂದ ರಾಣಿ ಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮಾತನಾಡಿ, ಬಂದರಿನ ಅಭಿವೃದ್ಧಿಗೆ ಈಗಾಗಲೇ 70 ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡಲಾಗಿದ್ದರೂ ಮೀನುಗಾರಿಕೆಗೆ ಅನುಕೂಲವಾಗಿಲ್ಲ. ಅಳಿವೆಯಲ್ಲಿ ಸಂಬಂಧಿಸಿದ ದುರಂತದಲ್ಲಿ 8 ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆ ಮಾಡಿದರೆ ಮಾತ್ರ ಬೈಂದೂರು ತಾಲೂಕಿನ ಎಲ್ಲ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ ಇಲ್ಲಿನ ಮೀನುಗಾರಿಕೆ ರಸ್ತೆ ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ ಅಳ್ವೆಕೋಡಿ ಮಾತನಾಡಿ, ಎರಡು ಕಡೆ ಮೀನುಗಾರರಲ್ಲಿ ತಪ್ಪು ಕಲ್ಪನೆಗಳಿಂದ ಭಿನ್ನಾಭಿಪ್ರಾಯ ಉಂಟಾಗಿದೆ ಇದನ್ನು ಸರಿಪಡಿಸಿಕೊಳ್ಳಲು ಸಾಧ್ಯ ಎಂದರು.

ಕಿರಿಮಂಜೇಶ್ವರ ಪಿಡಿಒ ರಾಜೇಶ ಕೊಡೇರಿ, ಉಪ್ಪುಂದ ಗ್ರಾ.ಪಂ.ಅಧ್ಯಕ್ಷ ಮೋಹನಚಂದ್ರ ಉಪ್ಪುಂದ, ಮಡಿಕಲ್ ಶ್ರೀ ಈಶ್ವರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಬಿ.ರಾಮ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗೇಶ್ ఖావి ಉಪ್ಪುಂದ, ಮೀನುಗಾರ ಮುಖಂಡ ಜಗನ್ನಾಥ, ಕೊಡೇರಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ.ಎಂ.ಯಕ್ಕರನಾಳ, ಮೀನುಗಾರಿಕೆ ಉಪ ನಿರ್ದೇಶಕ ಸಂಜೀವ ಅರಕೇರಿ ಉಪಸ್ಥಿತರಿದ್ದರು.

Exit mobile version