ನಾಗರಾಜ್ ಕೋಡಿ | ಕುಂದಾಪ್ರ ಡಾಟ್ ಕಾಂ ಲೇಖನ
ಮೀನುಗಾರರ ಕುಟುಂಬದಲ್ಲಿ ಜನಿಸಿದ ಗೋಪಾಲ ಖಾರ್ವಿ ಎಂಬ ವ್ಯಕ್ತಿ, ತನ್ನ ವೃತ್ತಿ ಹಾಗೂ ಬದುಕಿನ ಮಧ್ಯೆ ವಿಶಿಷ್ಟವಾದದ್ದನ್ನು ಸಾಧಿಸಬೇಕೆಂಬ ಛಲದಿಂದ ಸಾಗಿ ಗೆದ್ದ ಕಡಲವೀರ. ಉಡುಪಿ ಜಿಲ್ಲೆಯ ಕೋಡಿಕನ್ಯಾನ ಗ್ರಾಮದ ನಾಗೇಶ್ ಖಾರ್ವಿ ಮತ್ತು ರಾಧ ಖಾರ್ವಿ ದಂಪತಿಗಳ ಪುತ್ರರಾದ ಗೋಪಾಲ ಖಾರ್ವಿ ಅವರು, ಈಜಿನಲ್ಲಿ ಅನೇಕ ಸಾಧನೆಗಳನ್ನು ಮಾಡಿ ಹೆಸರು ಗಳಿಸಿದ್ದಾರೆ.
ಮೀನುಗಾರರ ಕುಟುಂಬದಲ್ಲಿ ಜನಿಸಿದ ಗೋಪಾಲ ಖಾರ್ವಿಯ ಜೀವನ ಸುಲಭದ ಹಾದಿಯಲ್ಲ. ತಂದೆಯವರು ಆರೋಗ್ಯ ಸಮಸ್ಯೆಯಿಂದ ಮೀನುಗಾರಿಕೆ ನಿಲ್ಲಿಸಿದಾಗ, ಬಾಲ್ಯದಲ್ಲಿಯೇ ಕುಟುಂಬದ ಹೊಣೆಗಾರಿಕೆ ಗೋಪಾಲ ಅವರ ಹೆಗಲೇರಿತು. ಏಳನೇ ತರಗತಿವರೆಗೂ ಓದಿ, ನಂತರ ಕುಟುಂಬದ ಬಾಧ್ಯತೆಗಾಗಿ ವಿದ್ಯಾಭ್ಯಾಸವನ್ನು ಬಿಟ್ಟು ಜೀವನಯಾನಕ್ಕೆ ಕಾಲಿಟ್ಟರು. ಅಕ್ಕ-ತಂಗಿಯರ ವಿವಾಹವನ್ನೂ ನೆರವೇರಿಸಿ, ಎಲ್ಲರಿಗೂ ಸುಖ ಜೀವನ ಕಟ್ಟಿಕೊಟ್ಟವರು ಇವರೇ. ಬಡತನದ ನಡುವೆ ಬೆಳೆದರೂ, ಎದುರಾದ ಸಂಕಷ್ಟಗಳಿಗೆ ಮಣಿಯದೆ, ಸಾಧನೆ ಮಾಡಬೇಕೆಂಬ ಛಲದಿಂದ ಇಂದಿಗೂ ಮುಂದುವರಿಯುತ್ತಿದ್ದಾರೆ.
ಬಾಲ್ಯದಲ್ಲಿ ಊರಿನ ಕೆರೆಯಲ್ಲೇ ಈಜು ಪ್ರಾರಂಭಿಸಿದ ಗೋಪಾಲ ಖಾರ್ವಿ, ಮೊದಲ ಸ್ಪರ್ಧೆಯಲ್ಲೇ ಪ್ರಾಣಾಪಾಯದಿಂದ ಪಾರಾದರು. ಆದರೆ ಅದು ಇವರಿಗೆ ಪಾಠವಾಯಿತು. ಬಳಿಕ ಹಿಂದಿರುಗಿ ನೋಡುವುದೇ ಇಲ್ಲ. ಈಜಿನಲ್ಲಿ ಅವರದ್ದು “ಏಕಲವ್ಯ”ನ ಸಾಧನೆ. ಕೋಚ್ ಇರಲಿಲ್ಲ. ಕೇವಲ ಟಿವಿಯಲ್ಲಿ, ಸ್ಪರ್ಧೆಗಳಲ್ಲಿ ಕ್ರೀಡಾಳುಗಳ ಈಜು ಶೈಲಿಯನ್ನು ನೋಡಿ ಕಲಿತವರು.

ಇವರ ಸಾಧನೆಯ ಹಾದಿ ಸುಗಮವಾಗಿರಲಿಲ್ಲ — ನೂರಾರು ಅಡಚಣೆಗಳು, ನಿರಾಸೆಗಳು, ಅವಮಾನಗಳು ಇವರನ್ನು ತಟ್ಟಿದರೂ ಅವರು ಹಿಂದೆ ಸರಿಯಲಿಲ್ಲ. ಅವರ ನಿಸ್ಸೀಮ ಪರಿಶ್ರಮ ಪ್ರತಿಯೊಬ್ಬ ಸಾಧಕನಿಗೂ ಸ್ಫೂರ್ತಿ.
ಗಿನ್ನೆಸ್ ದಾಖಲೆಗಾಗಿ ಅವರು ಹೋರಾಟವೇ ದಾಖಲೆ. ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಎದ್ದು ನದಿಯಲ್ಲಿ ಈಜು ಅಭ್ಯಾಸ ನಡೆಸಿದವರು. 2003ರಲ್ಲಿ ಹಂಗಾರಕಟ್ಟೆ ಅಳಿವೆಯಿಂದ ಸೆಂಟ್ ಮೇರೀಸ್ ದ್ವೀಪದವರೆಗೆ 40 ಕಿ.ಮೀ. ದೂರವನ್ನು 6 ಗಂಟೆಗಳಲ್ಲಿ ಈಜಿದರು., 2004ರಲ್ಲಿ ಗಂಗೊಳ್ಳಿಯಿಂದ ಮಲ್ಪೆವರೆಗೆ 80 ಕಿ.ಮೀ. ಸಮುದ್ರಯಾನವನ್ನು 11 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದರು. ಮುಂದೆ 2013ರಲ್ಲಿ ಕೈಕಾಲು ಕಟ್ಟಿಕೊಂಡು 3.71 ಕಿ.ಮೀ. ಈಜಿ ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರ್ಪಟೆಯಾದರು. ಸುಮಾರು ₹13 ಲಕ್ಷ ವೆಚ್ಚವಾಗಿದ್ದರೂ ಸ್ನೇಹಿತರ ಸಹಕಾರದಿಂದ ಆ ಕನಸನ್ನು ಸಾಕಾರಗೊಳಿಸಿದರು.
ಭೂತಾನ್ ಅಂತರಾಷ್ಟ್ರೀಯ ಕ್ರೀಡಾ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಮತ್ತು 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕಗಳು, 25ನೇ ಸ್ಟೇಟ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರಮಟ್ಟದ ಆಯ್ಕೆಯಾಗಿದ್ದರು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2010), ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ರಾಜ್ಯಮಟ್ಟದ ಸಂದೇಶ್ ಅವಾರ್ಡ್, ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಿಂದ “Certificate of Excellence” ಮತ್ತು “Best Sports Performer Award” ಗೌರವಗಳು ದೊರೆತಿವೆ. ಅಲ್ಲದೇ ಕೊಂಕಣಿ ಪಠ್ಯಪುಸ್ತಕ (9ನೇ ತರಗತಿ) ಯಲ್ಲಿ ಇವರ ಜೀವನ ಪಾಠವಾಗಿ ಸೇರಿಸಲಾಗಿದೆ.
ಈ “ಕಡಲವೀರ” ಈಜು ಮಾತ್ರವಲ್ಲದೆ ಕ್ರಿಕೆಟ್, ಕಬ್ಬಡಿ ಮುಂತಾದ ಕ್ರೀಡೆಗಳಲ್ಲಿಯೂ ಶ್ರೇಷ್ಠ ಕ್ರೀಡಾಪಟು. ಸುಮಾರು 25 ವರ್ಷಗಳ ಹಿಂದೆ ನಡೆದ ಕೊಂಕಣಿ ಖಾರ್ವಿ ಸಮಾಜದ ಕಬ್ಬಡಿ ಪಂದ್ಯಾಟದಲ್ಲಿ ಯಕ್ಷೇಶ್ವರಿ ಕೋಡಿಕನ್ಯಾನ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ.
ಕ್ರೀಡೆಯ ಜೊತೆಗೆ ಸಾಮಾಜಿಕ ಸೇವೆಗೂ ತಮ್ಮನ್ನು ತಾವು ಮುಡಿಪಾಗಿಟ್ಟಿವರು ಗೋಪಾಲ ಖಾರ್ವಿ. ದೈವ ದೇವರಲ್ಲಿ ಅಪಾರವಾದ ನಂಬಿಕೆಯುಳ್ಳ ಆಸ್ತಿಕವಾದಿ ಖಾರ್ವಿಗೆ ಭಜನೆಯೆಂದರೆ ಬಹಳ ಅಚ್ಚು ಮೆಚ್ಚು. ಇಷ್ಟೊಂದು ಸಾಧನೆ ಮಾಡಿದರೂ ಅಹಂಕಾರವಿಲ್ಲದ ಇವರ ಸರಳತೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇದೆ ಕಾರಣಕ್ಕೆ ಕೋಡಿಕನ್ಯಾನದಲ್ಲಿ ಇವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ.
“ಪ್ರತಿಯೊಬ್ಬರೂ ಈಜು ಕಲಿಯಬೇಕು. ಇದು ಜೀವ ಉಳಿಸುವ ಕಲೆ; ಜೊತೆಗೆ ದೇಹಕ್ಕೆ ಅತ್ಯುತ್ತಮ ವ್ಯಾಯಾಮ. ನೀರನ್ನು ಭಯಪಡುವುದಕ್ಕಿಂತ ಪ್ರೀತಿಸಬೇಕು.” – ಗೋಪಾಲ ಖಾರ್ವಿ
ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ, ಶಕ್ತಿ ಮತ್ತು ಶಿಸ್ತನ್ನು ನೋಡಿದರೆ “Age is just a number” ಎಂಬ ಮಾತಿಗೆ ಜೀವಂತ ಸಾಕ್ಷಿ. ಗೋಪಾಲ ಅವರ ಸಾಧನೆಯ ಹಾದಿ ಹೀಗೆ ಮುಂದುವರಿಯಲಿ