ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಲ್ಲಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿಎಸ್ಆರ್ ನಿಧಿಯಿಂದ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಆಫ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಇದರ ಉದ್ಘಾಟನಾ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇದರ ಉಪಾಧ್ಯಕ್ಷರಾದ ಪ್ರಶಾಂತ್ ಜೋಯಿಶಿ ನೆರವೇರಿಸಿದರು. ಇದರ ಜೊತೆಗೆ ಕಾಲೇಜಿನ ನೂತನ ಕೊಠಡಿಗಳ ಲೋಕಾರ್ಪಣೆಯನ್ನು ಶಾಸಕರು ಗಣ್ಯರ ಜೊತೆಗೂಡಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕರು ಮಾತನಾಡಿ, ಕ್ಷೇತ್ರದ ಸರಕಾರಿ ಶಾಲಾ, ಕಾಲೇಜುಗಳಿಗೆ ಕ್ಯಾನ್ ಫಿನ್ ಸಂಸ್ಥೆ ಇದುವರೆಗೆ 1 ಕೋಟಿಗೂ ಅಧಿಕ ಮೊತ್ತದ ವಿವಿಧ ರೀತಿಯ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ತನ್ನ ಸಿ. ಎಸ್.ಆರ್ ನಿಧಿಯಿಂದ ಒದಗಿಸಿದೆ. ಸಂಸ್ಥೆಯ ಈ ಕೊಡುಗೆ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಇದು ರಾಷ್ಟ್ರಸೇವೆಯ ಕೆಲಸವೆಂದು ಅಭಿಪ್ರಾಯಪಟ್ಟರು.
ಕ್ಯಾನ್ ಫಿನ್ ಹೋಂಮ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಶಾಂತ್ ಜೋಯಿಶಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿಗೆ ನೀಡಿದ ಕೊಡುಗೆಯ ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ತಾವು ಕೂಡ ಉನ್ನತ ಮಟ್ಟಕ್ಕೆ ಏರಬೇಕು ಮತ್ತು ವಿದ್ಯಾರ್ಜನೆ ಪಡೆದ ಕಾಲೇಜಿಗೆ ಕೊಡುಗೆ ನೀಡುವಂತಾಗಬೇಕೆಂದು ಅಭಿಪ್ರಾಯಪಟ್ಟರು.
ಕಟ್ಟಡ ಹಾಗೂ ಸೌರವಿದ್ಯುತ್ ಘಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಅವರು ವಹಿಸಿದ್ದರು.
ಅತಿಥಿಗಳಾಗಿ ಬೈಂದೂರು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾಗಿರುವ ಅನಿತಾ ಆರ್.ಕೆ., ಪ್ರತಿಮಾ ಜೋಯಿಶಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ. ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಶಶಿಕಲಾ ನಾಯಕ್ ಹಾಜರಿದ್ದರು. ಉಪನ್ಯಾಸಕರಾದ ಗಣೇಶ್ ಎಂ. ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪನ್ಯಾಸಕಿ ಶ್ರೀಲಕ್ಷ್ಮಿ ಕೆಎಸ್ ಅವರು ಸ್ವಾಗತಿಸಿ, ಉಪನ್ಯಾಸಕರಾದ ಜೀವನ್ ಕುಮಾರ್ ಶೆಟ್ಟಿ ವಂದನಾರ್ಪಣೆ ಗೈದರು.