Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಸಂಭ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶುಕ್ರವಾರದಂದು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ನಮ್ಮ ಮಾತೃಭಾಷೆಯಾದ ಕನ್ನಡದ ಮಹತ್ವದ ಕುರಿತು ಹೇಳುತ್ತಾ ಭಾಷೆಯನ್ನು ಚೆನ್ನಾಗಿ ಬಳಸಿ ಬೆಳೆಸಬೇಕು; ಹೆಚ್ಚು ಹೆಚ್ಚು ಉತ್ತಮ ಸಾಹಿತ್ಯವನ್ನು ಓದಿ ಜ್ಞಾನವನ್ನು ಪಡೆಯಬೇಕು. ಮಕ್ಕಳ ದಿನಾಚರಣೆಯ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಉತ್ತಮ ನಡವಳಿಕೆಯುಳ್ಳ ಮಕ್ಕಳು ಮುಂದೆ ಉತ್ತಮ ಭವಿಷ್ಯವನ್ನು ಹೊಂದಲಿರುವರು ಎಂದು ಹೇಳಿದರು.

ಶಿಕ್ಷಕ ವೃಂದದವರಿಂದ ನೃತ್ಯ, ಸಂಗೀತ, ನಾಟಕ ಮೊದಲಾದ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬಂದವು. ಕೆಲವು ವಿದ್ಯಾರ್ಥಿಗಳು ವಿವಿಧ ಸಂಗೀತ ವಾದ್ಯ (ತಬಲ, ಚಂಡೆ, ಹಾರ್ಮೋನಿಯಮ್, ಪಿಯಾನೋ, ಕೊಳಲು, ವಯೋಲಿನ್ ಇತ್ಯಾದಿ)ಗಳನ್ನು ನುಡಿಸಿದರು. ಜೊತೆಗೆ ಯಕ್ಷಗಾನ, ಸಂಗೀತ, ನೃತ್ಯ ಪ್ರದರ್ಶನವನ್ನೂ ವಿದ್ಯಾರ್ಥಿಗಳು ನೀಡಿದರು.

ವಿದ್ಯಾರ್ಥಿಗಳಾದ ನಿರಾಲಿ ಸರ್ವರನ್ನು ಸ್ವಾಗತಿಸಿದರೆ, ರಾಘವೇಂದ್ರ ಧನ್ಯವಾದ ಸಮರ್ಪಿಸಿದನು. ಶಮಾ, ಆರ್ವಿ, ರಿತಿ ಮತ್ತು ಆರ್ಯನ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version