Site icon Kundapra.com ಕುಂದಾಪ್ರ ಡಾಟ್ ಕಾಂ

ಸರಸ್ವತಿ ವಿದ್ಯಾಲಯದಲ್ಲಿ ಸಿ.ಎ ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮ 

ಕುಂದಾಪ್ರ ಡಾಟ್‌ ಕಾಂ ಸುದ್ದಿ. 
ಗಂಗೊಳ್ಳಿ:
ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದಿಂದ  ಕಲಿಕೆಯಲ್ಲಿ ಹೆಚ್ಚಿನ ಉನ್ನತಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಅಧ್ಯಕ್ಷ ಜಿ. ಗೋಪಾಲ್ ಪೂಜಾರಿ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಶ್ರೀ ನಾರಾಯಣಗುರು ಜನ ಸೇವಾ ಬಳಗ ಮತ್ತು ಸರಸ್ವತಿ ವಿದ್ಯಾಲಯದ ಎಸ್ ವಿ ಕಾಮರ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಚಾರ್ಟೆಡ್ ಅಕೌಂಟೆಂಟ್ ಪ್ರಶಿಕ್ಷಣಾರ್ಥಿಗಳ ಅನುಭವ ಹಂಚಿಕೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾರ್ಟೆಡ್ ಅಕೌಂಟೆಂಟ್ ಕಲಿಕೆಯಲ್ಲಿ ನಿರಂತರಾಗಿರುವ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಪ್ರಿಯಾ ಜಿ.ಪೈ ಮತ್ತು ಕ್ಷಮಾ ಆರ್. ಆಚಾರ್ಯ ಕ್ರಮವಾಗಿ ಸಿ.ಎ ಮತ್ತು ಎ.ಸಿ.ಸಿ.ಎ ಕೋರ್ಸಿನ ಬಗೆಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಾರ್ಗದರ್ಶನವನ್ನು ನೀಡಿದರು.  ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಘವೇಂದ್ರ  ಖಾರ್ವಿ ಶುಭ ಹಾರೈಸಿದರು.  

ಈ ಸಂದರ್ಭದಲ್ಲಿ ಕಳೆದ ವರ್ಷದ ದ್ವಿತೀಯ ಪಿಯುಸಿ ಪ್ರಥಮ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಮೊದಲ ಸ್ಥಾನಿಯಾಗಿ ಮೂಡಿಬಂದ ವಾಣಿಜ್ಯ ವಿಭಾಗದ ಕ್ಷಮಾ ಆರ್ ಆಚಾರ್ಯ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.  

ದೀಪಾಲಿ ಪ್ರಾರ್ಥಿಸಿದರು. ಗೌತಮಿ ಜಿ. ನಾಯಕ್ ಸ್ವಾಗತಿಸಿದರು.  ಎಸ್‌. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಾನಿ ನಿರೂಪಿಸಿದರು. ಸಿಂಧು ಖಾರ್ವಿ ವಂದಿಸಿದರು.

Exit mobile version