Site icon Kundapra.com ಕುಂದಾಪ್ರ ಡಾಟ್ ಕಾಂ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನಗಳ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ 23ನೇ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ 2025-26  ಸ್ವರಾಜ್ ಮೈದಾನದಲ್ಲಿ ಉದ್ಘಾಟನೆಗೊಂಡಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಕುಲಸಚಿವ ಡಾ. ವಸಂತ ಶೆಟ್ಟಿ ಮಾತನಾಡಿ, ಸಶಕ್ತ ಭಾರತವನ್ನು ಸಶಕ್ತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಿರ್ಮಾಣವಾಗಬೇಕೆಂದು ನಮ್ಮ ಕುಲಪತಿಗಳಾದ ಡಾ ಭಗವಾನ್ ಬಿ.ಸಿ ಅವರ ಕನಸು. ಆ ನೆಲೆಯಲ್ಲಿ ಈ ಕ್ರೀಡಾಕೂಟವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ದೀಪನಕ್ಕೆ ನೀಡುವ ಪ್ರೋತ್ಸಾಹವನ್ನು ಸಾಕ್ಷೀಕರಿಸುತ್ತದೆ.

ಕ್ರೀಡೆ ಎನ್ನುವುದು ಕೇವಲ ಶಕ್ತಿ ಅಥವಾ ಕೌಶಲ್ಯದ ಸ್ಪರ್ಧೆಯಲ್ಲ.  ಅದು ಮೌಲ್ಯಗಳ ಶಿಕ್ಷಣವಾಗಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಸೋಲು-ಗೆಲುವಿನ ನಡುವೆಯೂ ನಿಲ್ಲುವ ಸ್ಥೈರ್ಯ ಕಲಿಸುತ್ತದೆ. ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡುವ ಮಹತ್ವವು ಅತ್ಯಂತ ಸೂಕ್ತವೂ, ಅಗತ್ಯವೂ ಆಗಿದೆ. ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಮತ್ತು ಹೊಣೆಗಾರಿಕೆಯಂತಹ ಗುಣಗಳನ್ನು ಬೆಳೆಸುತ್ತದೆ.
ಕರ್ನಾಟಕ ಕೌನ್ಸಿಲ್ ಫಾರ್ ಅಲೈಡ್ ಮತ್ತು ಹೆಲ್ತ್ಕೇರ್ ಪ್ರೊಫೆಶನ್ಸ್ನ ಅಧ್ಯಕ್ಷ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಯು. ಟಿ. ಇಫ್ತಿಖಾರ್ ಅಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಎ. ಕೋಟ್ಯಾನ್, ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಇಲ್ಲಿ ಸ್ಪರ್ಧೆ, ಪ್ರಯತ್ನ ಮತ್ತು ಕಲಿಕೆ ಮುಖ್ಯ. ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ, ಖುಷಿ ಮತ್ತು ಮುಂದುವರಿಯುವ ಉತ್ಸಾಹವನ್ನು ಮೂಡಿಸಿದರೆ,  ಸೋಲು ಅದೇ ಮಟ್ಟದಲ್ಲಿ ನಮಗೆ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಗೆಲುವು ನಮ್ಮ ಸಾಮರ್ಥ್ಯವನ್ನು ದೃಢಪಡಿಸಿದರೆ, ಸೋಲು ನಮ್ಮ ಸಾಮರ್ಥ್ಯವನ್ನು ಹುಡುಕುವಂತೆ ಮಾಡುತ್ತದೆ.  ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಎರಡೂ ನಮಗೆ ಸಹಕಾರಿ ಎಂದರು.

ರಾಷ್ಟ್ರದ ನಷಾ ಮುಕ್ತ ಭಾರತ ಅಭಿಯಾನಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಕ್ರಿಯ ಬೆಂಬಲ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಈ ಕ್ರೀಡಾಕೂಟದ ಪಥಸಂಚಲನದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶೇಷ ಪ್ಲಕಾರ್ಡ್ಗಳು ಮತ್ತು ಬ್ಯಾನರ್‌ಗಳು ಹಿಡಿದು ನಷಾ ಮುಕ್ತ ಭಾರತ ಸಂದೇಶವನ್ನು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಸಾವಿರಾರು  ವಿದ್ಯಾರ್ಥಿಗಳಿಗೆ ತಲುಪಿಸಿದರು.

ಜೇಷ್ಯಾ ಡಿಸೋಜಾ, ಉಷಾರಾಣಿ ಜಿ ಎಚ್, ವಿಶಾಲ್ ವಿ ಸಾಲ್ಯಾನ್, ಕ್ಯಾಥರಿನ್ ತೋಮಸ್,  ಮಹೇಂದರ್ ಚೌಧರಿ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು.

ಮೊದಲ ದಿನದ ಅಂತ್ಯಕ್ಕೆ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜಿನ ವಿದ್ಯಾರ್ಥಿಗಳು 14 ಪಾಯಿಂಟ್‌ಗಳೊಂದಿಗೆ ಮುನ್ನಡೆ ಕಾಪಾಡಿಕೊಂಡರೆ, ಸೈಂಟ್ ಅಥೆನಾ ಕಾಲೇಜು 13 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮೂರು ದಿನಗಳ ಕ್ರೀಡಾಕೂಟದಲ್ಲಿ ರಾಜ್ಯದ 127 ಕಾಲೇಜುಗಳಿಂದ 924 ಕ್ರೀಡಾಪಟುಗಳು ಪಾಲ್ಗೊಂಡರು. ಪಥಸಂಚನಲದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಿಂಡಿಕೇಟ್ ಸದಸ್ಯರಾದ ಡಾ. ಶಿವಶರಣ್ ಶೆಟ್ಟಿ, ಸೆನೆಟ್ ಸದಸ್ಯೆ ವೈಶಾಲಿ ಶ್ರೀಜಿತ್, ಕ್ರೀಡಾಕೂಟದ ವೀಕ್ಷಕರುಗಳಾದ ಡಾ. ಅನಿಲ್ ಜೋಸೆಫ್, ಡಾ ಜಯಕುಮಾರ್, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಇದ್ದರು.

ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ರಾಜೇಶ್ ಡಿಸೋಜಾ ನಿರೂಪಿಸಿದರು.

Exit mobile version