Kundapra.com ಕುಂದಾಪ್ರ ಡಾಟ್ ಕಾಂ

ಬಂಡಾಯ ಅಭ್ಯರ್ಥಿಗಳಿಗೆ ಅಪಪ್ರಚಾರವೇ ಬಂಡವಾಳ: ಸಚಿವ ವಿನಯಕುಮಾರ್ ಸೊರಕೆ

ಬೈಂದೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಇವರಿಗೆ ಹೆಚ್ಚಿನ ಮತ ದೊರಕುವಂತೆ ಮಾಡಬೇಕು. ಈ ಸಂದರ್ಭ ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವವರನ್ನು ಸಾಧ್ಯವಾದಷ್ಟು ದೂರವಿಡಿ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಹೇರೆಂಜಾಲು ವಿಜಯ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿ, ಕೊಲ್ಲೂರು, ಕಾಲ್ತೋಡು, ಖಂಬದಕೋಣೆ, ಜಡ್ಕಲ್, ಗೋಳಿಹೊಳೆ ಮತ್ತು ಹೇರೂರು ಗ್ರಾಪಂ ವ್ಯಾಪ್ತಿಯ ಪಕ್ಷದ ಸ್ಥಳೀಯ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ಅಧಿಕೃತ ಅಭ್ಯರ್ಥಿಗೆ ಗೆಲುವಿಗೆ ಬೇಕಾದಷ್ಟು ಮತಗಳಿದೆ. ಪಕ್ಷದಲ್ಲಿ ವರಿಷ್ಟರ ಹಾಗೂ ಅಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಹಾಗೂ ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ ಎಂದರು.

ಪ್ರತಾಪ್ಚಂದ್ರ ಶೆಟ್ಟಿಯವರು ವಾರಾಹಿ ಯೋಜನೆ, ಸಿಆರ್‌ಝೆಡ್ ಸಮಸ್ಯೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಸ್ತೂರಿ ರಂಗನ್ ಹೋರಾಟಗಳಲ್ಲಿ ಮೂಂಚೂಣಿಯಲ್ಲಿದ್ದು, ರೈತರ ಪರ ಹೋರಾಟ ನಡೆಸಿದ್ದಾರೆ. ಪಾರದರ್ಶಕ ಆಡಳಿತಕ್ಕಾಗಿ ಗ್ರಾಪಂನ ವಿಕೇಂದ್ರಿಕರಣ, ಸದಸ್ಯರಿಗೆ ಹೆಚ್ಚಿನ ಅಧಿಕಾರ ಸಿಗುವಲ್ಲಿ ಹಾಗೂ ಅವರ ಗೌರವಧನ ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್‌ನಲ್ಲಿಯೂ ಕೂಡಾ ಹೋರಾಟ ಮಾಡಿದ್ದಾರೆ ಎಂದರು.

ಪ್ರತಾಪ್ಚಂದ್ರ ಶೆಟ್ಟಿಯವರ ಕಾರ್ಯಸಾಧನೆ ವಾಟ್ಸಾಪ್ ಹಾಗೂ ಫೇಸ್‌ಬುಕ್‌ಗಳ್ಲಿ ಬರಲಿಲ್ಲ. ಮಾಧ್ಯಮಗಳಿಂದ ಹೆಚ್ಚು ಪ್ರಚಾರವೂ ಸಿಗಲಿಲ್ಲ. ಹೀಗಾಗಿ ಶೆಟ್ಟಿಯವರು ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಾ ಎಲ್ಲವೂ ನನಗೆ ಬೇಕೆಂಬ ಸ್ವಾರ್ಥಿಗಳು ಜಿಪಂ, ತಾಪಂ ಚುನಾವಣಾ ಸಮಯದಲ್ಲಿ ಆಂತರಿಕ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇವರು ಸಂಸದರಾಗಲು ಆಸ್ಕರ್ ಫೆರ್ನಾಂಡೀಸ್ ಕಾರಣ ಎಂಬುದನ್ನು ಮರೆಯಬಾರದು ಎಂದು ಪರೋಕ್ಷವಾಗಿ ಜಯಪ್ರಕಾಶ್ ಹೆಗ್ಡೆಯವರಿಗೆ ಸೊರಕೆ ಟಾಂಗ್ ನೀಡಿದರು.

ಶಾಸಕ ಕೆ. ಗೋಪಾಲ ಪೂಜಾರಿ, ಪಕ್ಷದ ಅಭ್ಯರ್ಥಿ ಪ್ರತಾಪ್ಚಂದ್ರ ಶೆಟ್ಟಿ, ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್, ಸದಸ್ಯ ಬಿ. ರಘುರಾಮ ಶೆಟ್ಟಿ, ತಾಪಂ ಸದಸ್ಯರಾದ ಜ್ಯೋತಿ ನಾಯ್ಕ್, ಎಸ್. ರಾಜು ಪೂಜಾರಿ, ಮಾಜಿ ಸದಸ್ಯ ಹೆಚ್. ವಿಜಯ್ ಶೆಟ್ಟಿ, ಸುಬ್ರಹ್ಮಣ್ಯ ಪೂಜಾರಿ, ವಾಸುದೇವ ಯಡಿಯಾಳ ಹಾಗೂ ಎಲ್ಲಾ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾಲ್ತೋಡು ಗ್ರಾಪಂ ಉಪಾಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Exit mobile version