ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ’ಸಿದ್ಧಿಸೌರಭ 2025’ ವಾರ್ಷಿಕೋತ್ಸವ ಸಮಾರಂಭವು ಇತ್ತೀಚಿಗೆ ಬಹಳ ಅದ್ದೂರಿಯಾಗಿ ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವೀಣಾ ಬನ್ನಂಜೆ ಅವರು ಮಾತನಾಡಿ, ಈ ಕಾಲದಲ್ಲಿ ಮಕ್ಕಳು ವಿದ್ಯಾಭ್ಯಾಸದ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶಾಲೆಗಳು, ಪೋಷಕರು ಪ್ರಯತ್ನಿಸಬೇಕಾದರೆ ಬಹಳಷ್ಟು ಸಮಸ್ಯೆಗಳು ತಲೆದೋರುತ್ತವೆ. ಕೆಲವಷ್ಟು ಮೊಬೈಲ್ ಆಟಗಳು, ಆಡಿ ಬೆಳೆಯಬೇಕಾದ ಮಕ್ಕಳ ಜೀವನದ ಆಟವನ್ನೇ ಮುಗಿಸುತ್ತಿವೆ.
ಹೊರಾಂಗಣ ಆಟಗಳು ಎಲ್ಲಿ ಅಧಿಕವಾಗಿರುವುದೋ ಅಲ್ಲಿ ಈ ರೀತಿಯ ಸಮಸ್ಯೆಗಳು ತಲೆದೋರಲಾರವು. ಈ ಶಾಲೆಯ ಕ್ರೀಡಾಸಾಧನೆಯನ್ನು ನೋಡಿದರೆ, ನಿಶ್ಚಯವಾಗಿ ಮಕ್ಕಳಿಗೆ ಹೊರಾಂಗಣ ಆಟಗಳು ಲಭಿಸುತ್ತಿವೆ ಎಂದು ಮನದಟ್ಟಾಗುತ್ತಿದೆ. ಇಲ್ಲಿ ರಚಿತವಾದ ಪ್ರತಿಯೊಂದು ವಿಭಾಗಕ್ಕೂ ಮತಂಗ, ಶಿಬಿ, ಘಟೋತ್ಕಚ ಮೊದಲಾದ ಬೇರೆ ಬೇರೆ ಹೆಸರನ್ನಿಟ್ಟಿರುವುದು ಮತ್ತು ಅವು ಬಹಳ ಅರ್ಥಗರ್ಭಿತವಾಗಿರುವುದು ಕಂಡುಬರುತ್ತಿವೆ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಅಂಕಗಳಿಗೆ ಮಾತ್ರ ಸೀಮಿತವಾದ ಜೀವನ ನಮ್ಮದಲ್ಲ. ಅದನ್ನು ಮೀರಿ ಸಾಧಿಸಬೇಕೇ ವಿನಃ ಅಧೈರ್ಯದಿಂದ ಜೀವನವನ್ನು ನಾಶ ಮಾಡಿಕೊಳ್ಳಬಾರದು. ದೇವರು ಕೊಟ್ಟ ಜೀವನವನ್ನು ಅನುಭವಿಸಬೇಕು, ಭಗವಂತನಲ್ಲಿ ಪ್ರಾರ್ಥಿಸಬೇಕು. ಇರುವುದರಿಂದ ದಾನ ಧರ್ಮಾದಿಗಳನ್ನು ಮಾಡಿ ಜೀವನ ನಡೆಸಬೇಕು ಎಂದು ಕಥೆಗಳ ಮೂಲಕ, ತಮ್ಮ ಜೀವನಾನುಭವದ ಮಾತುಗಳ ಮೂಲಕ ಎಲ್ಲರಲ್ಲೂ ಹೊಸ ಮಿಂಚಿನ ಅನುಭವ ಮೂಡಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣರಾವ್ ಮಾತನಾಡಿ, ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಕೂಡಿದ್ದು, ತಮ್ಮನ್ನು ತಾವು ಉದ್ಧರಿಸಿಕೊಳ್ಳುವ ಮಾರ್ಗದಲ್ಲಿ ಪ್ರಯತ್ನಪೂರ್ವಕವಾಗಿ ಸಾಗಬೇಕು. ಮರಗಳು ಹಣ್ಣುಗಳಿಂದ ತುಂಬಿದಾಗ ಬಗ್ಗಿ ಇರುವಂತೆ, ನೀರಿಂದ ಕೂಡಿದ ಮೋಡಗಳು ನಿಧಾನವಾಗಿ ಸಾಗುತ್ತಾ ಮಳೆ ಸುರಿಸುವಂತೆ, ವಿದ್ಯೆ ಎಂಬ ಸಂಪತ್ತನ್ನು ಹೊಂದಿದ ವ್ಯಕ್ತಿಗಳು ವಿನಯವಂತರಾಗಿ ಪರೋಪಕಾರ ಮಾಡುತ್ತಾ ಸಮಾಜಹಿತಚಿಂತಕರಾಗಿ ಜೀವನ ನಡೆಸಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ಟರು ಮಾತನಾಡಿ, ಸಂಸ್ಕೃತಿಯನ್ನು ಅರಿತು ಸಂಸ್ಕಾರವನ್ನು ಹೊಂದಿ ಸಂಸಾರವೆಂಬ ಈ ಜಗತ್ತಿನಲ್ಲಿ ಬಾಳುವಂತೆ ಮಕ್ಕಳನ್ನು ಬೆಳೆಸುವ ಕೆಲಸವನ್ನು ಎಸ್ ಎಸ್ ಆರ್ ಎಸ್ ಮಾಡುತ್ತಾ ಬಂದಿದ್ದು, ಅದನ್ನು ಚನ್ನಾಗಿ ಮುಂದುವರಿಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖವಾಗಿದೆ. ಅದಕ್ಕೆ ಸಹಕರಿಸುತ್ತಿರುವ ಎಲ್ಲಾ ಪೋಷಕರನ್ನೂ ಕೃತಜ್ಞತೆಯಿಂದ ಗೌರವಿಸುತ್ತೇವೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ತಿಮ್ಮಪ್ಪ ಹೆಗಡೆ ಅವರು ಅಧ್ಯಕ್ಷತೆಯ ನುಡಿಗಳಲ್ಲಿ ನಮ್ಮೀ ಶಾಲೆಯು ಶೈಕ್ಷಣಿಕ ಸಾಧನೆಗಳೊಂದಿಗೆ ಕ್ರೀಡಾ ಸಾಧನೆ, ಸಾಹಿತ್ಯ ಸಾಧನೆಗಳಲ್ಲೂ ಮುನ್ನುಗ್ಗುತ್ತಿರುವುದು ನಮಗೆ ಸಂತಸದ ಸಂಗತಿ. ಈ ರೀತಿ ಮುಂದುವರಿಯುವುದು ಸಂಸ್ಥಾಪಕರ ನಿಜವಾದ ಆಶಯವೇ ಆಗಿದೆ. ವೀಣಾ ಬನ್ನಂಜೆಯವರ ಅನುಭವದ ನುಡಿ ಮಕ್ಕಳಿಗೆ ಸನ್ಮಾರ್ಗ ಪ್ರೇರಕವಾಗಿತ್ತು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಪ್ರಾಸ್ತಾವಿಕವಾಗಿ ವಾರ್ಷಿಕ ವರದಿ ವಾಚನಗೈಯ್ಯುತ್ತಾ ಶಾಲೆಯು ಸುಸಜ್ಜಿತ ಕ್ರೀಡಾಂಗಣವನ್ನೂ, ನೂತನವಾದ ವಿದ್ಯಾರ್ಥಿ ವಸತಿನಿಲಯವನ್ನೂ ಸಿದ್ಧಪಡಿಸುತ್ತಿರುವ ವಿಷಯವನ್ನು ತಿಳಿಸಿದರು. ಮಕ್ಕಳ ಸಾಧನೆಯನ್ನು ಸರ್ವರ ಸಮ್ಮುಖದಲ್ಲಿ ಪ್ರಕಟಪಡಿಸಿದರು. ಮೊದಲ ದಿನ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತಾ ಸದಾರಾಮ್ ಪ್ರಾಥಮಿಕ ಶಾಲೆಯ ವಾರ್ಷಿಕ ವರದಿವಾಚನ ನಡೆಸಿದರು.
ಕಳೆದ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ದತ್ತಿಬಹುಮಾನದೊಂದಿಗೆ ಸನ್ಮಾನಿಸಲಾಯಿತು. ನೂತನ ಸಾಹಿತಿಯಾಗಿ ಹೊರಹೊಮ್ಮಿದ ರಿಷಿಕಾ ದೇವಾಡಿಗರನ್ನು ಮತ್ತು ಶಾಲೆಯಿಂದ ರಾಜ್ಯ-ರಾಷ್ಟ್ರ-ಎಸ್‌ಜಿಎಫ್‌ಐ ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ವಿದ್ಯಾರ್ಥಿ ನಾಯಕ ಗಂಭೀರ್ ಜಿ. ಗೌಡ, ವಿದ್ಯಾರ್ಥಿ ನಾಯಕಿ ಭವ್ಯಶ್ರೀ ಶೆಟ್ಟಿ, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಸರ್ವ ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಅಶ್ವಿನೀ ಸ್ವಾಗತಿಸಿ, ಶಿಕ್ಷಕಿ ಶ್ರದ್ಧಾ ಜಿ. ನಾಯಕ್ ಮತ್ತು ಸಚಿನ್ ಎಚ್. ಸಭಾ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿ ನಾಯಕಿ ಭವ್ಯಶ್ರೀ ವಂದಿಸಿದರು.
ಆನಂತರ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ನೃತ್ಯ ರೂಪಕ, ನಾಟಕ, ಪ್ರಹಸನಗಳು, ನೃತ್ಯಗಳು, ಮೈಮ್ ಶೋ ಮತ್ತು ಪಿರಾಮಿಡ್ ಶೋಗಳು ವೀಕ್ಷಕರ ಮನಸೂರೆಗೊಂಡವು. ಹತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಅಹನಿ, ಋತ್ವಿಕ್, ಆಶಿಷ್, ರಾನ್ಸ್ಲೆ, ಹರ್ಷಿತ್, ಪಾರ್ಥ, ಬ್ರಾಹ್ಮೀ, ಮನ್ವಿತಾ, ಸಮನ್ವಿತಾ, ಶ್ರಾವ್ಯಾ, ಸುದರ್ಶನ, ತನ್ಮಯ್ ಆರ್ ಹೆಗಡೆ, ಶ್ರದ್ಧಾ, ಸಾನ್ವಿ ವಿ. ಎಮ್., ಹಿತಶ್ರೀ, ಜಾನ್ಹವಿ, ಆಯುಷ್ ಟಿ, ಅಮೋಘ, ಸೃಜನ್, ಶ್ರೀಹರಿ, ಸೃಷ್ಟಿ, ಅನನ್ಯಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು.