ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ರಂಗದ ಶ್ರೇಷ್ಠ ಸಾಧಕ , ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಅವರು ಬುಧವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಯಕ್ಷ ಕವಿ ಕಂದಾವರ ರಘುರಾಮಶೆಟ್ಟಿ ಅವರು ಬಹುಮುಖ ಪ್ರತಿಭೆಯ ಶ್ರೇಷ್ಠ ಪ್ರಸಂಗಕರ್ತರು. ನೂರು ನಾಟಕಗಳಲ್ಲಿ ಹಾಸ್ಯ ನಟನಾಗಿ, ಯಕ್ಷಗಾನದ ಭಾಗವತರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ, ಪ್ರಸಂಗಕರ್ತರಾಗಿ, ನಾಟಕ, ಶಿಶು ಗೀತೆ ಅಭಿನಯ ಗೀತೆ, ಕವನಗಳನ್ನು ರಚಿಸಿದ ಅವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು. ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿ ಅವರು ‘ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದರು. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿಯಂತಹ ಸೂಪರ್ ಹಿಟ್ ಪ್ರಸಂಗಗಳನ್ನು ಕೊಡುಗೆಯಾಗಿ ನೀಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ಪುರಾಣ ಪ್ರವಚನದಲ್ಲಿ ವಾಚಕರಾಗಿ, ಪ್ರವಚಕರಾಗಿದ್ದರು. ಆರರಿಂದ ಏಳು ಪ್ರಶಸ್ತಿಗಳನ್ನು ಪಡೆದಿದ್ದರು.
ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ 1936ರಲ್ಲಿ ಜನಿಸಿದ್ದರು. ತಮ್ಮ ಆರಂಭದ ಬದುಕಿನಲ್ಲಿ ‘ಕಂಡೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿದ್ದ ಕಂದಾವರ ರಘುರಾಮ ಶೆಟ್ಟಿಯವರು, ‘ಮಾದರಿ ಶಿಕ್ಷಕʼ ಪ್ರಶಸ್ತಿಗೆ ಭಾಜನರಾಗಿದ್ದರು. ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಜತೆ ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

