ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೇವಾ ಸಂಗಮ ಶಿಶು ಮಂದಿರಗಳಲ್ಲಿ ಅಜಿತ್ ಕುಮಾರ್ ಅವರ ಪುಣ್ಯ ತಿಥಿಯನ್ನು ಸೇವಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ವಿವಿಧ ಸೇವೆಗಳ ಮೂಲಕ ಕಾರ್ಯಕ್ರಮ ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಕಳೆದ 39 ವರ್ಷಗಳಿಂದ ಇಂತಹ ಚಟುವಟಿಕೆಗಳ ಮೂಲಕ ಸೇವಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಅಧ್ಯಕ್ಷ ಬಿ. ರಾಘವೇಂದ್ರ ಪೈ ಹೇಳಿದರು.
ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ವತಿಯಿಂದ 39ನೇ ವರ್ಷದ ಸೇವಾ ದಿನಾಚರಣೆ ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭ ಸಾಧಕ ಕಲಾವಿದ ಪಾಂಡುರಂಗ ಮಡಿವಾಳ ಗಂಗೊಳ್ಳಿ ಅವರನ್ನು ಶಿಶು ಮಂದಿರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಆಟದ ಮೈದಾನವನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಸ್ವಚ್ಛಗೊಳಿಸಲಾಯಿತು. ಶಿಶು ಮಂದಿರದ ಸದಸ್ಯರಾದ ಉಷಾ ಮಡಿವಾಳ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಮಾತಾಜಿ ರತ್ನ, ಮಕ್ಕಳ ಪೋಷಕರು ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರಾದ ಸವಿತಾ ಯು.ದೇವಾಡಿಗ ಪ್ರಸ್ತಾವಿಕ ಮಾತುಗಳನ್ನಾಡಿದರು. ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.