Kundapra.com ಕುಂದಾಪ್ರ ಡಾಟ್ ಕಾಂ

ಭಾರತೀಯ ಸಾಹಿತ್ಯವನ್ನು ಸಮೃದ್ಧಗೊಳಿಸಿ ಕಣ್ಮರೆಯಾದ ದ್ರುವತಾರೆ ಎಸ್.ಎಲ್ ಭೈರಪ್ಪ: ಹರೀಶ್ ಟಿ.ಜಿ.

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವೆಲ್ಲವನ್ನು ಬದುಕಿನಿಂದ ದೂರವಿಟ್ಟು ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ ಮತ್ತು ಹಸನ್ಮುಖದಿಂದ ನಡೆಸುವ ಬದುಕು ಸಾರ್ಥಕ ಬದುಕೆಂದು ಕರೆಯಲ್ಪಡುತ್ತದೆ. ಬಾಳಿನಲ್ಲಿ ಕಷ್ಟ-ಕಾರ್ಪಣ್ಯ, ನೋವು-ನಲಿವು, ಆಸೆ-ನಿರಾಸೆ, ಸುಖಃ-ದುಃಖ ಮುಂತಾದ ಏಳು-ಬೀಳುಗಳ ನಡುವೆ ಆಹ್ಲಾದದಿಂದ, ನಾವೆಲ್ಲರೂ ಬದುಕಬೇಕು ಎಂಬೆಲ್ಲಾ ಮೌಲ್ಯಗಳನ್ನು ಸಾಹಿತ್ಯ ಲೋಖದ ಧ್ರುವ ತಾರೆ ಎಸ್.ಎಲ್ ಬೈರಪ್ಪರವರ ಎಲ್ಲಾ ಕೃತಿಗಳಲ್ಲೂ ಹಾಸುಹೊಕ್ಕಾಗಿತ್ತೆಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹರೀಶ್ ಟಿ.ಜಿ. ಅಭಿಪ್ರಾಯಪಟ್ಟರು.

ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಐಕ್ಯೂಎಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಎಸ್.ಎಲ್. ಭೈರಪ್ಪನವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಈ ನುಡಿಗಳನ್ನಾಡಿದರು

ಎಸ್.ಎಲ್. ಭೈರಪ್ಪನವರು ತಮ್ಮ ಆತ್ಮ ವೃತ್ತಾಂತ, ಸಾಹಿತ್ಯ, ಚಿಂತನೆ, ಗ್ರಾಮೀಣ ಸಂಸ್ಕೃತಿ ಮುಂತಾದ ಚಿಂತನಾಶೀಲ ಕೃತಿಗಳಿಂದ ಭಾರತೀಯ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರ ಕೃತಿಗಳು ಅಭಿವ್ಯಕ್ತಪಡಿಸಿದ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಹಾಗೂ ಸಾಮಾಜಿಕ ಕಳಕಳಿಗಳು ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಶಾಶ್ವತವಾಗಿ ಉಳಿಯುವಂತವುಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಭೈರಪ್ಪನವರ ಕೃತಿಗಳನ್ನು ಓದಿ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಿವೃತ್ತ ಶಿಕ್ಷಕಿ ಸೂರ್ಯಕಾಂತಿ, ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಗ್ರಂಥಾಲಯ ಸಮಿತಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ವಿದ್ಯಾ ಶೇಟ್, ಆದರ್ಶ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂತಿಮ ಬಿ.ಸಿ.ಎ ವಿದ್ಯಾರ್ಥಿನಿ ವೈಷ್ಣವಿ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ ಕಾಲೇಜಿನ ಗ್ರಂಥಪಾಲಕರಾದ ವೆಟರನ್ ರವಿಚಂದ್ರ ಹೆಚ್.ಎಸ್. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾ ಶೆಟ್ ನಿರೂಪಿಸಿ, ದೀಪಾ ವಂದಿಸಿದರು.

Exit mobile version