ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೀವ್ರ ಬೆಳೆ ನಷ್ಟದಿಂದ ಬಳಲುತ್ತಿರುವ ಕರ್ನಾಟಕದ ಅಡಿಕೆ ಬೆಳೆಗಾರರಿಗೆ, ಅದರಲ್ಲೂ ವಿಶೇಷವಾಗಿ, ಮಲೆನಾಡು ಪ್ರದೇಶದ ಅಡಿಕೆ ಬೆಳೆಗಾರ ನೆರವಿಗಾಗಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಲೋಕಸಭೆಯಲ್ಲಿ ಒತ್ತಾಯಿಸಿದರು.
ಲೋಕಸಭಾ ಕಲಾಪದಲ್ಲಿ ಶೂನ್ಯ ವೇಳೆ ಪ್ರಸ್ತಾವದ ಮೂಲಕ ವಿಷಯ ಪ್ರಸ್ತಾಪಿಸಿದ ಸಂಸದ ರಾಘವೇಂದ್ರ, ವಿಶೇಷವಾಗಿ ಕರ್ನಾಟಕದ, ಅದರಲ್ಲೂ ಮಲೆನಾಡು ಪ್ರದೇಶದ ಅಡಿಕೆ ಬೆಳೆಗಾರರು, ಹಳದಿ ಎಲೆ ರೋಗ (YLD) ಮತ್ತು ಎಲೆ ಚುಕ್ಕೆ ರೋಗ (LSD) ಹರಡುವಿಕೆಯಿಂದ ಭಾರಿ ಇಳುವರಿ ನಷ್ಟವನ್ನು ಎದುರಿಸುತ್ತಿದ್ದಾರೆ, ಈ ರೋಗಗಳು ಇಡೀ ತೋಟವನ್ನೇ ನಾಶಮಾಡುತ್ತಿವೆ. ಈ ವರ್ಷದ ಮೇ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಹೆಚ್ಚಿರುವ ಈ ರೋಗದ ಪರಿಣಾಮದಿಂದಾಗಿ, ಅಡಿಕೆ ಬೆಳೆ ಬಹುತೇಕ ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ತಮ್ಮ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನಂತಹ ತಕ್ಷಣದ ಪರಿಹಾರ ನೀಡುವ ಸಾಧ್ಯತೆಯ ಬಗ್ಗೆ ಪರಿಶೀಲಿಸಬೇಕು ಮತ್ತು ಆವಶ್ಯಕ ರೋಗ ನಿಯಂತ್ರಣ ಕ್ರಮಗಳನ್ನು ಕೂಡಲೇ ಜಾರಿಗೆ ತರಲು ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ (WBCIS) ಗಂಭೀರ ನ್ಯೂನತೆಗಳ ಬಗ್ಗೆಯೂ ಸಂಸದ ರಾಘವೇಂದ್ರ ಸರ್ಕಾರದ ಗಮನ ಸೆಳೆದರು. 2024–25ರ ಖಾರಿಫ್ ಬೆಲೆ ನಷ್ಟಕ್ಕೆ ಜಿಲ್ಲೆಯ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ 100+ ಮಳೆ ಮಾಪಕಗಳಲ್ಲಿ ಸುಮಾರು 50% ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯ ಸರ್ಕಾರ ಘೋಷಿಸಿದ ಬ್ಯಾಕಪ್ ಹವಾಮಾನ ಕೇಂದ್ರಗಳನ್ನು ತಡವಾಗಿ ಗುರುತು ಮಾಡಲಾಗಿದೆ ಮತ್ತು ಸಂಪೂರ್ಣ, ವಿಭಿನ್ನ ಮಳೆ ಮಾದರಿ ಹೊಂದಿರುವ ಪ್ರದೇಶಗಳಲ್ಲಿ, 20–45 ಕಿ.ಮೀ ದೂರದಲ್ಲಿ ಗುರುತು ಮಾಡಲಾಗಿದ್ದು, ಇದರಿಂದ ವಿಮೆಯ ಲೆಕ್ಕಾಚಾರದಲ್ಲಿ ತಾಂತ್ರಿಕ ದೋಷಗಳು ಉಂಟಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ರಾಘವೇಂದ್ರ ಹೇಳಿದರು.
ಕೇಂದ್ರ ಕೃಷಿ ಸಚಿವಾಲಯ ತುರ್ತಾಗಿ ಮಧ್ಯಪ್ರವೇಶಿಸಿ, ಹತ್ತಿರದ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಖರವಾದ ಹವಾಮಾನ ಕೇಂದ್ರಗಳ ಡೇಟಾವನ್ನು ಆಧರಿಸಿ, WBCIS ಪರಿಹಾರವನ್ನು ಮರು ಲೆಕ್ಕಾಚಾರ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ರಾಘವೇಂದ್ರ ಒತ್ತಾಯಿಸಿದರು. ದೈನಂದಿನ SMS ಮಳೆ ಮುನ್ನೆಚ್ಚರಿಕೆ ಸೇವೆಯನ್ನು ಕೂಡ ಮರುಸ್ಥಾಪಿಸಬೇಕು ಎಂದು ಸಂಸದರು ವಿನಂತಿಸಿ ಕೊಂಡರು. ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ಅಡಿಕೆ ಬೆಳೆಗಾರರಿಗೆ ನೆರವಾಗಲು, ತುರ್ತು ವಿಶೇಷ ಸಹಾಯ ಪ್ಯಾಕೇಜ್ ನೀಡುವ ಕುರಿತು ಪರಿಗಣಿಸಬೇಕು ಎಂದು ಸರ್ಕಾರವನ್ನು ರಾಘವೇಂದ್ರ ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಈ ಅತ್ಯುತ್ತಮ ರೈತ ಕೇಂದ್ರಿತ ಯೋಜನೆಯನ್ನು, ಅತ್ಯಂತ ಸಮರ್ಪಕವಾಗಿ ನಮ್ಮ ರೈತರಿಗೆ ನ್ಯಾಯಯುತವಾಗಿ ಅರ್ಹವಾದ ರಕ್ಷಣೆ ಮತ್ತು ನೆರವು ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.

