ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವನವೆಂದರೆ ಕಡು ಕಷ್ಟ ಎಂದು ಗೋಚರಿಸಬಹುದು. ಆದರೆ ಇಲ್ಲಿ ಯಾವಾಗಲೂ ನೀವು ಗೆಲ್ಲುವ ಅವಕಾಶ ಇದ್ದೇ ಇರುತ್ತದೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಅದುವೇ ನಿಮ್ಮ ನಗು ಮುಖದ ಯಶಸ್ಸಿನ ಮಾನದಂಡವಾಗುತ್ತದೆ. ಸ್ಪರ್ಧಾ ಮನೋಭಾವದಿಂದ ಪೂರ್ಣ ಸಾಮರ್ಥ್ಯದೊಂದಿಗೆ ಮುನ್ನುಗಿದರೆ ಗೆಲುವು ಸಾಧ್ಯವೆಂದು ಅರಣ್ಯ ಗುತ್ತಿಗೆದಾರರಾದ ಜೆ.ಪಿ. ಶೆಟ್ಟಿ ಕಟ್ಕೆರೆ ಅವರು ನುಡಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಮಾತನಾಡಿ, ಸರಿಯಾದ ಯೋಚನೆ ಮತ್ತು ಯೋಜನೆಯಿಂದ ಮುನ್ನಡೆಯಿರಿ ಎಂದು ಶುಭ ಕೋರಿದರು. ವಿದ್ಯಾರ್ಥಿಗಳ ಕ್ರೀಡಾ ಸ್ಪೂರ್ತಿ ನೋಡಿ ಮೆಚ್ಚಿ ಚಾಂಪಿಯನ್ ಆದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ಘೋಷಿಸಿ ಪ್ರೋತ್ಸಾಹಿಸಿದರು.
ಹಾನ್‌ಗಲ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಿರಣ್ ವಿಷ್ಣು ಪಟಗಾರ ಮಾತನಾಡಿ, ಜೀವನದಲ್ಲಿ ಕ್ರೀಡೆಗೆ ಪಠ್ಯದಷ್ಟೇ ಪ್ರಾಮುಖ್ಯತೆ ಕೊಟ್ಟು ಸಾಧನೆ ಮಾಡಲು ಇಂದು ತುಂಬಾ ಅವಕಾಶಗಳಿವೆ. ಕ್ರೀಡೆಯಿಂದ ಆರೋಗ್ಯ, ಆರೋಗ್ಯದಿಂದ ಆಯುಷ್ಯ, ಆಯುಷ್ಯ ಇದ್ದರೆ ಉತ್ತಮ ಭವಿಷ್ಯವಿದೆ ಎಂದು ಹಿತ ನುಡಿದರು. ಈ ಸಂದರ್ಭದಲ್ಲಿ ಶ್ರೀಯುತರನ್ನು ಕಾಲೇಜಿನಲ್ಲಿ ಹಿಂದೆ ಸಲ್ಲಿಸಿದ ಸೇವೆಯನ್ನು ನೆನೆದು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಮ ಆಚಾರ್ಯ ಮಾತನಾಡಿ, ಅವರು ಸಂತೋಷಕ್ಕೆ ಹತ್ತಿರದ ದಾರಿ ಆರೋಗ್ಯ. ಸದಾ ಆರೋಗ್ಯದಿಂದಿರಲು ಕ್ರೀಡೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳೆಲ್ಲ ಸಂಭ್ರಮದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ನಾಗರಾಜ ಯು., ಕ್ರೀಡಾ ಸಮಿತಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಷೇಕ್, ಸಿಂಚನಾ, ಮೇಘನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈಷ್ಣವಿ ಮತ್ತು ತಂಡದವರು ಪ್ರಾರ್ಥಿಸಿದರು. ಕ್ರೀಡಾ ಸಂಚಾಲಕರಾದ ಮನೋಹರ ಬಿ. ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ವಂದಿಸಿದರು. ರಶ್ಮಿ ಉಡುಪ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಕ ಪಥ ಸಂಚಲನದೊಂದಿಗೆ ಅದ್ದೂರಿಯಾಗಿ ನಡೆದ ಕ್ರೀಡಾಕೂಟದಲ್ಲಿ ಅಭಿಷೇಕ್ ಅಂತಿಮ ಬಿ.ಕಾಂ., ಧನುಷ್ ಪ್ರಥಮ ಬಿ.ಕಾಂ., ಪದ್ಮಶ್ರೀ ಪ್ರಥಮ ಬಿ.ಕಾಂ. ಪುರುಷ ಮತ್ತು ಮಹಿಳಾ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಹಂಚಿಕೊಂಡರು.